'ಪಿಎಂ-ಇಬಸ್ ಸೇವೆ': 10,000 ಎಲೆಕ್ಟ್ರಿಕ್ ಬಸ್‌ ಖರೀದಿಗೆ ಕೇಂದ್ರ ಸಂಪುಟ ಅನುಮೋದನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸಿಟಿ ಬಸ್‌ಗಳ ಕಾರ್ಯಾಚರಣೆಯನ್ನು ಹೆಚ್ಚಿಸುವ 'ಪಿಎಂ-ಇಬಸ್ ಸೇವೆ' ಯೋಜನೆಗೆ ಅನುಮೋದನೆ ನೀಡಿದೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್
ಕೇಂದ್ರ ಸಚಿವ ಅನುರಾಗ್ ಠಾಕೂರ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸಿಟಿ ಬಸ್‌ಗಳ ಕಾರ್ಯಾಚರಣೆಯನ್ನು ಹೆಚ್ಚಿಸುವ 'ಪಿಎಂ-ಇಬಸ್ ಸೇವೆ' ಯೋಜನೆಗೆ ಅನುಮೋದನೆ ನೀಡಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, ಪಿಎಂ-ಇಬಸ್ ಸೇವೆ ಯೋಜನೆ ಅಡಿ 169 ನಗರಗಳಲ್ಲಿ 10,000 ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲಾಗುವುದು ಎಂದರು.

ಸುಮಾರು 57,613 ಕೋಟಿ ರೂ.ಗಳ ವೆಚ್ಚದ 'ಪಿಎಂ-ಇಬಸ್ ಸೇವೆ' ಯೋಜನೆಯಲ್ಲಿ ಕೇಂದ್ರ ಸರ್ಕಾರ 20,000 ಕೋಟಿ ನೀಡಲಿದ್ದು, ಉಳಿದ ಹಣವನ್ನು ರಾಜ್ಯ ಸರ್ಕಾರಗಳು ಭರಿಸಲಿವೆ.

"PPP ಮಾದರಿಯಲ್ಲಿ ಬಸ್‌ಗಳನ್ನು ಖರೀದಿಯನ್ನು ಮಾಡಲಾಗುವುದು. ಇದಕ್ಕಾಗಿ ಸ್ಪರ್ಧಾತ್ಮಕ ಬಿಡ್ಡಿಂಗ್ ಇರುತ್ತದೆ. ಈ ಯೋಜನೆಯು 2037 ರವರೆಗೆ ಜಾರಿಯಲ್ಲಿರುತ್ತದೆ" ಎಂದು ಠಾಕೂರ್ ಹೇಳಿದ್ದಾರೆ.

ಕೇಂದ್ರಾಡಳಿತ ಪ್ರದೇಶಗಳು, ಈಶಾನ್ಯ ಪ್ರದೇಶ ಮತ್ತು ಗುಡ್ಡಗಾಡು ರಾಜ್ಯಗಳ ಎಲ್ಲಾ ರಾಜಧಾನಿ ನಗರಗಳು ಸೇರಿದಂತೆ ಮೂರು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳನ್ನು ಈ ಯೋಜನೆ ಒಳಗೊಳ್ಳುತ್ತದೆ ಮತ್ತು ಸಂಘಟಿತ ಬಸ್ ಸೇವೆಗಳನ್ನು ಹೊಂದಿರದ ನಗರಗಳಿಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಈ ಯೋಜನೆಯು ಸಿಟಿ ಬಸ್ ಕಾರ್ಯಾಚರಣೆಯಲ್ಲಿ ಸುಮಾರು 10,000 ಬಸ್‌ಗಳ ನಿಯೋಜನೆ ಮಾಡುವ ಮೂಲಕ 45,000 ರಿಂದ 55,000 ಜನರಿಗೆ ನೇರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಠಾಕೂರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com