
ಕೊಟ್ಟಾಯಂ: ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರನ್ನು ಹೊಗಳಿದ್ದಕ್ಕೆ ನಾನು ಕೆಲಸ ಕಳೆದುಕೊಂಡಿರುವುದಾಗಿ ಇತ್ತೀಚೆಗೆ ಹೇಳಿಕೊಂಡಿದ್ದ ಮಹಿಳೆಯೊಬ್ಬರ ವಿರುದ್ಧ ಪೊಲೀಸರು ಶನಿವಾರ ನಕಲಿ ದಾಖಲೆ ಸೃಷ್ಟಿಸಿದ ಮತ್ತು ಗುರುತು ಮರೆಮಾಚಿದ ಪ್ರಕರಣ ದಾಖಲಿಸಿದ್ದಾರೆ.
ಉಪಚುನಾವಣೆ ಎದುರಿಸುತ್ತಿರುವ ಪುತ್ತುಪ್ಪಲ್ಲಿ ವಿಧಾನಸಭಾ ಕ್ಷೇತ್ರದ ಪಶುವೈದ್ಯಕೀಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪಿ ಒ ಸತಿ ಅಮ್ಮ ಅವರು ಉಮ್ಮನ್ ಚಾಂಡಿ ಅವರನ್ನು ಹೊಗಳಿದ್ದಕ್ಕೆ ನನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಆರೋಪಿಸಿದ್ದರು. ಮಹಿಳೆಯ ಈ ಆರೋಪ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತು.
ಸತಿ ಅಮ್ಮ ಅವರು ಫೋರ್ಜರಿ ಮಾಡಿ, ಸರ್ಕಾರಿ ಪಶುವೈದ್ಯಕೀಯ ಕೇಂದ್ರದಲ್ಲಿ ತಾತ್ಕಾಲಿಕ ಸ್ವೀಪರ್ ಕೆಲಸ ಪಡೆದಿದ್ದರು ಪೊಲೀಸರು ಹೇಳಿದ್ದಾರೆ.
ಐಪಿಸಿ ಸೆಕ್ಷನ್ 420(ವಂಚನೆ), 468(ನಕಲಿ) ಮತ್ತು 471 (ನಕಲಿ ದಾಖಲೆ ಬಳಸುವುದು) ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಮಹಿಳಾ ಸಬಲೀಕರಣ ಜಾಲ ಕುಟುಂಬಶ್ರೀ ಮಾಜಿ ಪದಾಧಿಕಾರಿ ಲಿಜಿಮೋಲ್ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement