ಹರಿಯಾಣ: ನುಹ್ ನಲ್ಲಿ ನಾಳೆ ಹಿಂದೂ ಪರ ಸಂಘಟನೆಗಳಿಂದ ಶೋಭಾ ಯಾತ್ರೆ, ಬಿಗಿ ಭದ್ರತೆ 

ಹರಿಯಾಣದ ನುಹು ಮತ್ತಿತರ ಪ್ರದೇಶಗಳಲ್ಲಿ ನಾಳೆ ಶೋಭಾಯಾತ್ರೆ ನಡೆಸುವುದಾಗಿ ಸರ್ವ ಜಾತಿಯ ಹಿಂದೂ ಮಹಾಪಂಚಾಯತ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ನುಹ್ ನಲ್ಲಿ ಪೊಲೀಸ್ ಭದ್ರತೆ
ನುಹ್ ನಲ್ಲಿ ಪೊಲೀಸ್ ಭದ್ರತೆ

ನುಹ್: ಹರಿಯಾಣದ ನುಹು ಮತ್ತಿತರ ಪ್ರದೇಶಗಳಲ್ಲಿ ನಾಳೆ ಶೋಭಾಯಾತ್ರೆ ನಡೆಸುವುದಾಗಿ ಸರ್ವ ಜಾತಿಯ ಹಿಂದೂ ಮಹಾಪಂಚಾಯತ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.  ಕಟ್ಟುನಿಟ್ಟಿನ ನಿಗಾ ವಹಿಸಲು ಅರೆಸೇನಾ ಪಡೆಗಳು ಸೇರಿದಂತೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ಗಡಿಗಳಲ್ಲಿಯೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಜುಲೈ 31 ರಂದು ಸಂಭವಿಸಿದ ಹಿಂಸಾಚಾರ ಹಾಗೂ ಸೆಪ್ಟೆಂಬರ್ 3-7ರ ಅವಧಿಯಲ್ಲಿ ನುಹ್‌ನಲ್ಲಿ ನಡೆಯಲಿರುವ ಜಿ 20 ಶೆರ್ಪಾ ಗ್ರೂಪ್‌ನ ಸಭೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರಣದಿಂದ ಆಡಳಿತವು ಯಾತ್ರೆಗೆ ಅನುಮತಿ ನಿರಾಕರಿಸಿದೆ ಎಂದು ಹರಿಯಾಣ ಪೊಲೀಸ್ ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಶನಿವಾರ ಹೇಳಿದ್ದಾರೆ. 

ಶೋಭಾಯಾತ್ರೆ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ತಡೆಯುವ ನಿಟ್ಟಿನಲ್ಲಿ 28ರವರೆಗೂ  ಮೊಬೈಲ್ ಇಂಟರ್ ನೆಟ್ ಸೌಲಭ್ಯವನ್ನು ಸ್ಥಗಿತಗೊಳಿಸಿರುವುದಾಗಿ ಸರ್ಕಾರ ಘೋಷಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ  ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ  ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮಮತಾ ಸಿಂಗ್ ಭಾನುವಾರ ಹೇಳಿದ್ದಾರೆ.

24 ಅರೆಸೇನಾ ಪಡೆ ತುಕಡಿ ಜೊತೆಗೆ 1,900 ಹರಿಯಾಣ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿದೆ. ಜಿಲ್ಲೆಯ ಎಲ್ಲಾ ಪ್ರವೇಶ ಕೇಂದ್ರಗಳನ್ನು ಮುಚ್ಚಲಾಗಿದೆ. ಮಲ್ಹಾರ್ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನೂ ಬಂದ್ ಮಾಡಲಾಗಿದೆ ಎಂದು ನುಹ್‌ನಲ್ಲಿರುವ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com