ಭಾರತೀಯ ಸಂಸ್ಕೃತಿಯ ಪ್ರಕಾರ ನೌಕಾಪಡೆ ಶ್ರೇಣಿಗಳ ಹೆಸರು ಬದಲಾವಣೆ: ಮೋದಿ

ಸಶಸ್ತ್ರಪಡೆಯಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದು, ನೌಕಾಪಡೆಯ ಶ್ರೇಣಿಗಳ ಹೆಸರುಗಳನ್ನು ಭಾರತೀಯ ಸಂಸ್ಕೃತಿಯ ಪ್ರಕಾರ ಮರುನಾಮಕರಣ ಮಾಡುವುದಾಗಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಮುಂಬೈ: ಸಶಸ್ತ್ರಪಡೆಯಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದು, ನೌಕಾಪಡೆಯ ಶ್ರೇಣಿಗಳ ಹೆಸರುಗಳನ್ನು ಭಾರತೀಯ ಸಂಸ್ಕೃತಿಯ ಪ್ರಕಾರ ಮರುನಾಮಕರಣ ಮಾಡುವುದಾಗಿ ತಿಳಿಸಿದ್ದಾರೆ.
 
ಕದನ ಕಾರ್ಯತಂತ್ರ ಹಾಗೂ ದೂರದೃಷ್ಟಿಗಾಗಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಗೌರವ ಸಲ್ಲಿಸಿರುವ ಪ್ರಧಾನಿ ಮೋದಿ, 17 ನೇ ಶತಮಾನದ ಮರಾಠ ಸಾಮ್ರಾಟ ಶಿವಾಜಿ ಅವರಿಗೆ ನೌಕಾಪಡೆಯ ಮಹತ್ವದ ಅರಿವಿತ್ತು ಎಂದು ಹೇಳಿದ್ದಾರೆ.
 
ಪ್ರಧಾನಿ ಮೋದಿ ನೌಕಾ ಪಡೆ ದಿನದ ಅಂಗವಾಗಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವನ್ ನಲ್ಲಿ ಮಾತನಾಡಿ, ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲು ನಾವು ಒತ್ತು ನೀಡುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ನೌಕಾಪಡೆಯ ಹಡಗಿಗೆ ಮಹಿಳಾ ಅಧಿಕಾರಿಯೊಬ್ಬರು ಕಮಾಂಡರ್ ಆಗಲಿದ್ದಾರೆ ಎಂಬ ಘೋಷಣೆಯ ನಂತರ ಮೋದಿ ನೌಕಾಪಡೆಯನ್ನು ಶ್ಲಾಘಿಸಿದರು. ಭಾರತೀಯ ನೌಕಾಪಡೆಯಲ್ಲಿನ ಶ್ರೇಣಿಗಳನ್ನು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಮರುನಾಮಕರಣ ಮಾಡಲಾಗುವುದು ಎಂದು ಮೋದಿ ಇದೇ ವೇಳೆ ತಿಳಿಸಿದ್ದಾರೆ. 

ನೌಕಾಪಡೆಯ ಅಧಿಕಾರಿಗಳು ಧರಿಸುವ ಎಪಾಲೆಟ್‌ಗಳು ದೇಶದ ಮೊದಲ ಆಧುನಿಕ ನೌಕಾಪಡೆಯನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾದ ಛತ್ರಪತಿ ಶಿವಾಜಿಯ ಪ್ರತಿಬಿಂಬವನ್ನು ಹೊಂದಿರುತ್ತವೆ ಎಂದು ಮೋದಿ ಘೋಷಿಸಿದರು.

ಇತಿಹಾಸ ಪ್ರಸಿದ್ಧ ಮರಾಠ ಸಾಮ್ರಾಜ್ಯದ ಸಂಸ್ಥಾಪಕರಾದ ಶಿವಾಜಿ ಅವರು ದೇಶಕ್ಕೆ ನೌಕಾ ಶಕ್ತಿಯ ಪ್ರಾಮುಖ್ಯತೆಯನ್ನು ತಿಳಿದಿದ್ದರು ಮತ್ತು ತನ್ನ ಆಳ್ವಿಕೆಯಲ್ಲಿ ಬಲಿಷ್ಠ ನೌಕಾ ಪಡೆಯನ್ನು ನಿರ್ಮಿಸಿದ್ದರು ಎಂದು ಪ್ರಧಾನಿ ಹೇಳಿದ್ದಾರೆ

ಛತ್ರಪತಿ ಶಿವಾಜಿಯಿಂದ ಸ್ಫೂರ್ತಿ ಪಡೆದು ಭಾರತವು ಗುಲಾಮಗಿರಿಯ ಮನಸ್ಥಿತಿಯನ್ನು ತೊರೆದು ಎಲ್ಲಾ ರಂಗಗಳಲ್ಲಿ ಮುನ್ನಡೆಯುತ್ತಿದೆ ಎಂದು ಮೋದಿ ಪ್ರತಿಪಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com