ಫೈನಲ್ಸ್ ನಲ್ಲಿ ಭಾರತ ವಿಶ್ವಕಪ್ ಕಳೆದುಕೊಂಡಂತಾಯಿತು: ಛತ್ತೀಸ್ ಗಢದ ಕಾಂಗ್ರೆಸ್ ಸೋಲಿನ ಬಗ್ಗೆ ಟಿಎಸ್ ಸಿಂಗ್ ದೇವ್
ಛತ್ತೀಸ್ ಗಢ: ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಚುನಾವಣಾ ಸೋಲಿನ ಆತ್ಮಾವಲೋಕನ ನಡೆಯುತ್ತಿದ್ದು, ನಿರ್ಗಮಿತ ಡಿಸಿಎಂ ಟಿಎಸ್ ಸಿಂಗ್ ದೇವ್ ರಾಜ್ಯದಲ್ಲಿ ಕಾಂಗ್ರೆಸ್ ಸೋಲನ್ನು ಭಾರತದ ವಿಶ್ವಕಪ್ ಸೋಲಿಗೆ ಹೋಲಿಕೆ ಮಾಡಿದ್ದಾರೆ.
ಟೀಂ ಇಂಡಿಯಾ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಫೈನಲ್ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತ್ತು. ಅದೇ ಮಾದರಿಯಲ್ಲಿ ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ಅಧಿಕಾರ ಕಳೆದುಕೊಂಡಿತು ಎಂದು ಟಿಎಸ್ ಸಿಂಗ್ ದೇವ್ ಹೇಳಿದ್ದಾರೆ.
ಸಿಎಂ ಭೂಪೇಶ್ ಬಘೇಲ್ ಸೇರಿದಂತೆ ನಮ್ಮ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿತ್ತು ಎಂದು ಹೇಳಿರುವ ಟಿಎಸ್ ಸಿಂಗ್, ಭೂಪೇಶ್ ಬಘೇಲ್ ಹಾಗೂ ತಾವು ಒಗ್ಗಟ್ಟಿನಿಂದ ಇರುವುದಾಗಿ ತಿಳಿಸಿದ್ದಾರೆ.
ಅಂಬಿಕಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಂಗ್ ದೇವ್, 94 ಮತಗಳ ಅಂತರದಿಂದ ಸೋಲು ಕಂಡಿದ್ದರು. ಬುಡಕಟ್ಟು ಜನಾಂಗದ ಮತಗಳಲ್ಲಿ ಬದಲಾವಣೆಯಾಗಿದೆ ಎಂಬ ಅಭಿಪ್ರಾಯವನ್ನು ತಳ್ಳಿ ಹಾಕಿರುವ ಮಾಜಿ ಡಿಸಿಎಂ, ನಗರ ಪ್ರದೇಶದಲ್ಲಿ ಪಕ್ಷಕ್ಕೆ ಅತಿ ಹೆಚ್ಚಿನ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಕೈ' ಹಿಡಿಯದ ಹಿಂದಿ ಭಾಷಿಕರು, ಗ್ಯಾರಂಟಿಗಳಿಗೆ ಮನಸೋಲದ ಮತದಾರರು, ತೆಲಂಗಾಣಕ್ಕೆ ತೃಪ್ತಿ!
ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಅತ್ಯುತ್ತಮವಾದ ಫಲಿತಾಂಶ ಪಡೆದಿತ್ತು ಆದರೆ ವಿಧಾನಸಭೆ ಚುನಾವಣೆಯಲ್ಲಿ ಸೋತಿದೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಟಿಎಸ್ ಸಿಂಗ್ ದೇವ್, ಭಾರತ ಕ್ರಿಕೆಟ್ ತಂಡ ವಿಶ್ವಕಪ್ ನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್ ಪಂದ್ಯದಲ್ಲಿ ಸೋತಂತೆಯೇ ಕಾಂಗ್ರೆಸ್ ಗೂ ರಾಜ್ಯದಲ್ಲಿ ಆಗಿದೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ರಾಜ್ಯ ಕಾಂಗ್ರೆಸ್ ನಲ್ಲಿ ಒಡಕು ಇಲ್ಲ. ಆದರೆ ಪ್ರತಿಯೊಂದು ಹಂತದಲ್ಲಿಯೂ ಒಗ್ಗಟ್ಟಿನಿಂದ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ