ಮಹಾರಾಷ್ಟ್ರ: ರ‍್ಯಾಗಿಂಗ್ ನಿಂದ ಬೇಸತ್ತು ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಕರ್ಜತ್ ನಗರದ ಹಾಸ್ಟೆಲ್‌ನಲ್ಲಿ ಮೂವರು ರೂಮೇಟ್ಸ್ ಗಳ ಕಿರುಕುಳ ಮತ್ತು ರ‍್ಯಾಗಿಂಗ್ ನಿಂದ ಬೇಸತ್ತು 19 ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಗಢ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಕರ್ಜತ್ ನಗರದ ಹಾಸ್ಟೆಲ್‌ನಲ್ಲಿ ಮೂವರು ರೂಮೇಟ್ಸ್ ಗಳ ಕಿರುಕುಳ ಮತ್ತು ರ‍್ಯಾಗಿಂಗ್ ನಿಂದ ಬೇಸತ್ತು 19 ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಮೃತ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೂವರು ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306(ಆತ್ಮಹತ್ಯೆಗೆ ಪ್ರಚೋದನೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ ಎಂದು ಕರ್ಜಾತ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ. 

ಖಾಸಗಿ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಹರ್ಷಲ್ ಮಹಾಲೆ ಡಿಸೆಂಬರ್ 1 ರಂದು ಸಂಜೆ 7 ಗಂಟೆ ಸುಮಾರಿಗೆ ಹಾಸ್ಟೆಲ್‌ನಲ್ಲಿ ತನ್ನ ಕೊಠಡಿಯ ಸೀಲಿಂಗ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಒಂದೆರಡು ದಿನಗಳ ನಂತರ, ಮೃತ ಬಾಲಕನ ಪೋಷಕರು ಕೊಠಡಿಯಿಂದ ಸೂಸೈಡ್ ನೋಟ್ ಮತ್ತು ಆತನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದು, ಡಿಸೆಂಬರ್ 4 ರಂದು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಆತ್ಮಹತ್ಯೆ ಪತ್ರದಲ್ಲಿ ಮಹಾಲೆ, ತನ್ನ ಮೂವರು ರೂಮೇಟ್ಸ್ ಗಳು ಮಾನಸಿಕ ಕಿರುಕುಳ ಮತ್ತು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದು, ಅವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com