ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು: ಸಾಂವಿಧಾನಿಕವೇ ಅಥವಾ ಕಾನೂನುಬಾಹಿರವೇ? ನಾಳೆ 'ಸುಪ್ರೀಂ'ನಿಂದ ಮಹತ್ವದ ತೀರ್ಪು!

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಲಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಲಿದೆ. ಎರಡು ವಾರಗಳ ಕಾಲ ನಡೆದ ವಿಚಾರಣೆಯ ಬಳಿಕ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ತೀರ್ಪನ್ನು ಕಾಯ್ದಿರಿಸಿತ್ತು.

ಆರ್ಟಿಕಲ್ 370 ರದ್ದತಿ ವಿರುದ್ಧ ವಾದ ಮಂಡಿಸಿದ ಅರ್ಜಿಗಳಲ್ಲಿ ಮುಖ್ಯವಾಗಿ ಎರಡು ಸವಾಲುಗಳನ್ನು ಎತ್ತಲಾಗಿತ್ತು. ಮೊದಲನೆಯದು ರಾಷ್ಟ್ರಪತಿಗಳ ಆದೇಶಗಳ ಸಾಂವಿಧಾನಿಕತೆಗೆ ಸಂಬಂಧಿಸಿದೆ. ಆದರೆ ಎರಡನೆಯ ಸವಾಲು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಬಗ್ಗೆ.

ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯ ಒಪ್ಪಿಗೆಯಿಲ್ಲದೆ ರಾಷ್ಟ್ರಪತಿಗಳು ಸಾಂವಿಧಾನಿಕ ನಿಬಂಧನೆ 370 ಅನ್ನು ಪರೋಕ್ಷವಾಗಿ ತಿದ್ದುಪಡಿ ಮಾಡಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ. 'ಸಂವಿಧಾನ ಸಭೆ'ಯನ್ನು 'ವಿಧಾನಸಭೆ' ಯೊಂದಿಗೆ ಬದಲಿಸುವ ಮೂಲಕ ಇದನ್ನು ಸಕ್ರಿಯಗೊಳಿಸಲಾಯಿತು. ಎರಡನೆಯದಾಗಿ, ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019 ಸಂವಿಧಾನದ 3ನೇ ವಿಧಿಯ ಅಡಿಯಲ್ಲಿ ಅಸಂವಿಧಾನಿಕ ಎಂದು ಅವರು ವಾದಿಸುತ್ತಾರೆ.

ಈ ಆರ್ಟಿಕಲ್ ಹೊಸ ರಾಜ್ಯಗಳನ್ನು ರಚಿಸಲು ಮತ್ತು ಅಸ್ತಿತ್ವದಲ್ಲಿರುವ ರಾಜ್ಯಗಳ ಗಡಿಗಳನ್ನು ಬದಲಾಯಿಸಲು ಅಥವಾ ಮಾರ್ಪಡಿಸಲು ಸಂಸತ್ತಿಗೆ ಅಧಿಕಾರ ನೀಡುತ್ತದೆ. ಫೆಡರಲ್ ಪ್ರಜಾಸತ್ತಾತ್ಮಕ ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶದಂತೆ ಕಡಿಮೆ ಪ್ರಾತಿನಿಧ್ಯದ ಸ್ವರೂಪಕ್ಕೆ ಇಳಿಸುವ ಅಧಿಕಾರವನ್ನು 3ನೇ ವಿಧಿಯು ಸಂಸತ್ತಿಗೆ ನೀಡುವುದಿಲ್ಲ ಎಂದು ಅರ್ಜಿದಾರರು ವಾದಿಸಿದರು. ಫೆಡರಲ್ ಪ್ರಜಾಪ್ರಭುತ್ವದಲ್ಲಿ, ಸ್ವಾಯತ್ತ ಸ್ವ-ಆಡಳಿತದ ಹಕ್ಕು, ವಿಶೇಷವಾಗಿ ಸಾಂವಿಧಾನಿಕ ಮತ್ತು ರಾಜಕೀಯ ಸ್ಥಾನಮಾನಕ್ಕೆ ಸಂಬಂಧಿಸಿದಂತೆ, ಸಂವಿಧಾನದ ಭಾಗ III ರ ಅಡಿಯಲ್ಲಿ ಮೂಲಭೂತ ಹಕ್ಕು ಮತ್ತು ಕಾನೂನಿನಿಂದ ಸ್ಥಾಪಿಸಲಾದ ಸರಿಯಾದ ಪ್ರಕ್ರಿಯೆಯಿಲ್ಲದೆ ಅದನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದರು.

ಇದನ್ನೂ ಓದಿ: ಆರ್ಟಿಕಲ್ 370 ಕುರಿತು ಬ್ರೆಕ್ಸಿಟ್ ಮಾದರಿಯ ಜನಾಭಿಪ್ರಾಯ ಸಂಗ್ರಹಣೆ ಪ್ರಶ್ನೆಯೇ ಇಲ್ಲ: ಸುಪ್ರೀಂ ಕೋರ್ಟ್
 
2019ರ ಆಗಸ್ಟ್ 28ರಂದು ಮಾಜಿ ಸಿಜೆಐ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠವು ಈ ಅರ್ಜಿಗಳನ್ನು ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಕಳುಹಿಸಿತ್ತು. 2019ರ ಅಕ್ಟೋಬರ್ 1 ರಂದು ನ್ಯಾಯಮೂರ್ತಿ ಎನ್ವಿ ರಮಣ, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ, ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು ನವೆಂಬರ್ 14, 2019 ರಿಂದ ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಿತ್ತು. ಈ ಅರ್ಜಿಗಳನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಮುಂದೆ ಇಡಲಾಗಿತ್ತು. ಮಾರ್ಚ್ 2, 2020 ರಂದು, ಈ ಅರ್ಜಿಗಳನ್ನು ದೊಡ್ಡ ಪೀಠಕ್ಕೆ ಹಸ್ತಾಂತರಿಸಲು ಪೀಠವು ನಿರಾಕರಿಸಿತು.

ಇದರ ನಂತರ, ಜುಲೈ 11, 2023ರಂದು, ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು ಆಗಸ್ಟ್ 2, 2023 ರಿಂದ ಪ್ರಕರಣವನ್ನು ಆಲಿಸಲು ನಿರ್ಧರಿಸಿತು. ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು 16 ದಿನಗಳ ಚರ್ಚೆಯಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ, ಸಾಂವಿಧಾನಿಕ ಮತ್ತು ರಾಜಕೀಯ ಅಂಶಗಳನ್ನು ಪರಿಗಣಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com