ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ಅನುವು ಮಾಡಿಕೊಟ್ಟಿದ್ದ ಆರ್ಟಿಕಲ್ 370 ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಈ ನಡುವೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಅದರ ಭಾಗವಾಗಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸೇರಿದಂತೆ ಜಮ್ಮು-ಕಾಶ್ಮೀರದ ಪ್ರಮುಖ ರಾಜಕಾರಣಿಗಳಿಗೆ ಗೃಹ ಬಂಧನ ವಿಧಿಸಲಾಗಿತ್ತು ಎಂಬ ವರದಿಯೂ ಪ್ರಕಟವಾಗಿತ್ತು.
ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಗೊಳ್ಳುವುದಕ್ಕೂ ಮುನ್ನ ಪೊಲೀಸರು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರ ಮನೆಯ ಬಾಗಿಲನ್ನು ಸೀಲ್ ಮಾಡಿದ್ದಾರೆ, ಮುಫ್ತಿ ಅವರನ್ನು ಅಕ್ರಮವಾಗಿ ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಪಿಡಿಪಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿತ್ತು. ಆದರೆ ಈ ಬಗ್ಗೆ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂ ತೀರ್ಪಿಗೂ ಮುನ್ನ ಎನ್ ಸಿ, ಪಿಡಿಪಿ ನಾಯಕರಿಗೆ ಗೃಹ ಬಂಧನ ವಿಧಿಸಿರುವ ಆರೋಪ ಸಂಪೂರ್ಣ ಆಧಾರ ರಹಿತವಾದದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಎನ್ ಸಿ ನಾಯಕ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ ಅವರ ನಿವಾಸಗಳಿಗೆ ಪತ್ರಕರ್ತರ ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದರು.
Advertisement