
ಜೈಪುರ: ಬಿಜೆಪಿ ಹೈಕಮಾಂಡ್ ರಾಜಸ್ಥಾನ ನೂತ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಭಜನ್‌ಲಾಲ್ ಶರ್ಮಾ ಅವರನ್ನು ಹಾಗೂ ಪ್ರೇಮ್ ಚಂದ್ ಬೈರ್ವಾ ಮತ್ತು ದಿಯಾ ಕುಮಾರಿ ಅವರನ್ನು ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ.
ಜೈಪುರ ರಾಜಮನೆತನದಲ್ಲಿ ಜನಿಸಿದ ದಿಯಾ ಕುಮಾರಿ ಅವರು ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದು, “ಜನರ ರಾಜಕುಮಾರಿ” ಎಂದೇ ಖ್ಯಾತಿ ಪಡೆದಿದ್ದಾರೆ.
ರಾಜ್ಯಸ್ಥಾನದ ನೂತನ ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾದ 54 ವರ್ಷದ ದಿಯಾ ಅವರು ನವೆಂಬರ್ 25 ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದುಡು ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ರಾಜಸಮಂದ್ ಸಂಸದೆಯಾಗಿದ್ದ ದಿಯಾ ಕುಮಾರಿ ಅವರು ರಜಪೂತ ಸಮುದಾಯಕ್ಕೆ ಸೇರಿದ್ದಾರೆ.
ದಿಯಾ ಕುಮಾರಿ ಅವರು ಜನವರಿ 30, 1971 ರಂದು ರಾಜಮನೆತನದಲ್ಲಿ ಜನಿಸಿದರು ಮತ್ತು ಅವರ ಅಜ್ಜ, ಮಾನ್ ಸಿಂಗ್ II, ಬ್ರಿಟಿಷ್ ರಾಜ್ ಸಮಯದಲ್ಲಿ ಜೈಪುರದ ಕೊನೆಯ ಆಡಳಿತದ ಮಹಾರಾಜರಾಗಿದ್ದರು.
ದಿಯಾ ಕುಮಾರಿ ಅವರ ತಂದೆ ಬ್ರಿಗೇಡಿಯರ್ ಸವಾಯಿ ಭವಾನಿ ಸಿಂಗ್ ಅವರಿಗೆ 1971 ರಲ್ಲಿ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅವರ ಶೌರ್ಯಕ್ಕಾಗಿ ಮಹಾವೀರ ಚಕ್ರವನ್ನು ನೀಡಿ ಗೌರವಿಸಲಾಗಿದೆ.
ದಿಯಾ ಕುಮಾರಿ ಅವರು ಮಹಾರಾಣಿ ಗಾಯತ್ರಿ ದೇವಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು. ಜೈಪುರದ ಮಹಾರಾಣಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಬಳಿಕ ನರೇಂದ್ರ ಸಿಂಗ್ ಎಂಬವರನ್ನ ವಿವಾಹವಾದರು. ದಂಪತಿಗೆ ಜೈಪುರದ ರಾಜವಂಶಸ್ಥ ಪದ್ಮನಾಭ್ ಸಿಂಗ್ ಸೇರಿದಂತೆ ಅವರಿಗೆ ಮೂವರು ಮಕ್ಕಳಿದ್ದಾರೆ. ಆದ್ರೆ 2018ರಲ್ಲಿ ದಿಯಾ ಕುಮಾರಿ ಪತಿಗೆ ವಿಚ್ಛೇದನ ನೀಡಿದ್ದಾರೆ.
Advertisement