ಪಶ್ಚಿಮ ಬಂಗಾಳ: ರೈಲ್ವೆ ನಿಲ್ದಾಣದಲ್ಲಿ ಓವರ್‌ಹೆಡ್ ವಾಟರ್ ಟ್ಯಾಂಕ್ ಕುಸಿದು ಬಿದ್ದು ಮೂವರು ಸಾವು

ಪಶ್ಚಿಮ ಬಂಗಾಳದ ಬರ್ದ್ವಾನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಬುಧವಾರ ಮಧ್ಯಾಹ್ನ ಓವರ್‌ಹೆಡ್ ನೀರಿನ ಟ್ಯಾಂಕ್ ಕುಸಿದು ಬಿದ್ದು ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು 34 ಮಂದಿ ಗಾಯಗೊಂಡಿದ್ದಾರೆ. 
ಭಾರತೀಯ ರೈಲ್ವೆ
ಭಾರತೀಯ ರೈಲ್ವೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬರ್ದ್ವಾನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಬುಧವಾರ ಮಧ್ಯಾಹ್ನ ಓವರ್‌ಹೆಡ್ ನೀರಿನ ಟ್ಯಾಂಕ್ ಕುಸಿದು ಬಿದ್ದು ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು 34 ಮಂದಿ ಗಾಯಗೊಂಡಿದ್ದಾರೆ. 

ಗಾಯಗೊಂಡವರನ್ನು ಬರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.

ರೈಲ್ವೆ ಅಧಿಕಾರಿಗಳ ಪ್ರಕಾರ, ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನೂರಾರು ಪ್ರಯಾಣಿಕರು ಸ್ಥಳೀಯ ರೈಲುಗಳನ್ನು ಹತ್ತಲು ಕಾಯುತ್ತಿದ್ದ ವೇಳೆ ಪ್ಲಾಟ್‌ಫಾರ್ಮ್ ಸಂಖ್ಯೆ 2 ಮತ್ತು 3 ರ ನಡುವೆ ನೀರಿನ ಟ್ಯಾಂಕ್ ಕುಸಿದು ಬಿದ್ದಿದೆ.

ಟ್ಯಾಂಕ್ ಕಬ್ಬಿಣದಿಂದ ಮಾಡಿದ ರಚನೆಯ ಮೇಲಿತ್ತು ಮತ್ತು ಅದು ಇದ್ದಕ್ಕಿದ್ದಂತೆ ಕುಸಿದಿದೆ. ರಚನೆಯು ದುರ್ಬಲವಾಗಿತ್ತು ಮತ್ತು ನೀರಿನ ತೊಟ್ಟಿಯ ಭಾರವನ್ನು ತಡೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ರೈಲ್ವೆ ಅಧಿಕಾರಿಗಳು, ರೈಲ್ವೆ ಸಂರಕ್ಷಣಾ ಪಡೆ(ಆರ್‌ಪಿಎಫ್) ಸಿಬ್ಬಂದಿ ಮತ್ತು ಸರ್ಕಾರಿ ರೈಲ್ವೆ ಪೊಲೀಸ್(ಜಿಆರ್‌ಪಿ) ಸಿಬ್ಬಂದಿ ಅವಶೇಷಗಳಡಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ದುರ್ಘಟನೆಯಿಂದಾಗಿ ಈ ವಿಭಾಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಸುಮಾರು ಒಂದು ಗಂಟೆಯ ನಂತರ ಪ್ಲಾಟ್‌ಫಾರ್ಮ್ ಸಂಖ್ಯೆ 1 ಮತ್ತು 4 ರಲ್ಲಿ ರೈಲು ಸೇವೆ ಪುನಾ ಆರಂಭಿಸಲಾಗಿದೆ ಎಂದು ಪೂರ್ವ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com