'ಇದು ನಮ್ಮ ಅಧಿಕಾರ ವ್ಯಾಪ್ತಿ, ಸಂಸತ್ತಿನ ಭದ್ರತೆ ನನ್ನ ಕೆಲಸ': ಲೋಕಸಭಾ ಸ್ಪೀಕರ್ ಓಂ ಬಿರ್ಲಾ

ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯದ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಪಕ್ಷಗಳ ಬೇಡಿಕೆಗಳ ನಡುವೆ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ತು ಭವನದ ಪಾಲಕರಾಗಿ ಭದ್ರತೆ ಕಾಪಾಡುವುದು ತಮ್ಮ ಜವಾಬ್ದಾರಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ. 
ಲೋಕಸಭಾಧ್ಯಕ್ಷ ಓಂ ಬಿರ್ಲಾ
ಲೋಕಸಭಾಧ್ಯಕ್ಷ ಓಂ ಬಿರ್ಲಾ

ನವ ದೆಹಲಿ: ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯದ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಪಕ್ಷಗಳ ಬೇಡಿಕೆಗಳ ನಡುವೆ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ತು ಭವನದ ಪಾಲಕರಾಗಿ ಭದ್ರತೆ ಕಾಪಾಡುವುದು ತಮ್ಮ ಜವಾಬ್ದಾರಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ. 

ನಿನ್ನೆ ಇಡೀ ದಿನ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಸದಸ್ಯರ ಗದ್ದಲ, ಕೋಲಾಹಲ, ಘೋಷಣೆಗಳ ಮಧ್ಯೆ ಕಲಾಪ ಮುಂದೂಡಿಕೆಯಾಗಿ 14 ಮಂದಿ ಸದಸ್ಯರನ್ನು ಅಮಾನತು ಮಾಡಲಾಯಿತು. ಈ ಪ್ರಕರಣದಲ್ಲಿ ‘ಗೃಹ ಸಚಿವರು ಉತ್ತರಿಸಬೇಕು’ ಎಂದು ಪ್ರತಿಪಕ್ಷದ ಸದಸ್ಯರು ಪಟ್ಟು ಹಿಡಿದರು. ಇನ್ನು ಕೆಲವರು ಲೋಕಸಭೆಯಲ್ಲಿ ಅತಿಕ್ರಮಣದಾರರಿಗೆ ವಿಸಿಟರ್ ಪಾಸ್ ನೀಡಿದ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

"ಇಡೀ ಪಾರ್ಲಿಮೆಂಟ್ ಸೆಕ್ರೆಟರಿಯೇಟ್ ಸಂಸತ್ತಿನ ವ್ಯಾಪ್ತಿಗೆ ಬರುತ್ತದೆ, ವಿಶೇಷವಾಗಿ ಲೋಕಸಭೆಯ ಅಡಿಯಲ್ಲಿ... ಇದು ನಮ್ಮ ಅಧಿಕಾರ ವ್ಯಾಪ್ತಿ. ಲೋಕಸಭಾ ಸ್ಪೀಕರ್ ಆಗಿ, ಪ್ರತಿಯೊಬ್ಬರ ಭದ್ರತೆಯನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ನಾನು ಕುಳಿತು ನಿಮ್ಮೊಂದಿಗೆ ಚರ್ಚಿಸುತ್ತೇನೆ," ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಾವಿಗೆ ನುಗ್ಗುತ್ತಿದ್ದಂತೆ ಸ್ಪೀಕರ್ ಹೇಳಿದರು.

ಪ್ರತಿಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಂತೆ, "ಸರ್ಕಾರವು ಲೋಕಸಭೆಯ ಸಚಿವಾಲಯದ ಕಾರ್ಯಚಟುವಟಿಕೆಯಲ್ಲಿ ಎಂದಿಗೂ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನಾವು ಅದಕ್ಕೆ ಅನುಮತಿ ನೀಡುವುದಿಲ್ಲ" ಎಂದು ಬಿರ್ಲಾ ಹೇಳಿದರು.

ಎಲ್ಲರೂ ಒಗ್ಗೂಡಿ ಘಟನೆಯನ್ನು ಖಂಡಿಸಬೇಕೆ ಹೊರತು ಸದನದಲ್ಲಿ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಲೋಕಸಭೆಯ ಉಪನಾಯಕರೂ ಆಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

"ಭವಿಷ್ಯದಲ್ಲಿ, ನಾವೆಲ್ಲರೂ ಸಂಸದರು, ಅದು ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದವರಾಗಿರಲಿ, ಎಲ್ಲರೂ ಜಾಗರೂಕರಾಗಿರಬೇಕು. ಸಂಸತ್ತು ಭವನದೊಳಗೆ ಗಲಭೆ ಸೃಷ್ಟಿಸುವ ಇಂತಹ ಜನರಿಗೆ ನಾವು ಪಾಸ್ ಗಳನ್ನು ನೀಡಬಾರದು" ಎಂದು ರಾಜನಾಥ್ ಸಿಂಗ್ ಪ್ರತಿಭಟನೆ ಮಧ್ಯೆ ಹೇಳಿದರು. 

2001 ರ ಸಂಸತ್ತಿನ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ಪ್ರಮುಖ ಭದ್ರತಾ ಉಲ್ಲಂಘನೆಯಲ್ಲಿ, ಇಬ್ಬರು ವ್ಯಕ್ತಿಗಳು - ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ - ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಹಾರಿ, ಡಬ್ಬಿಗಳಿಂದ ಬಣ್ಣದ ಹೊಗೆಯನ್ನು ಬಿಟ್ಟು ಘೋಷಣೆಗಳನ್ನು ಕೂಗಿದರು. 

ಅದೇ ಸಮಯದಲ್ಲಿ, ಇತರ ಇಬ್ಬರು ಆರೋಪಿಗಳು - ಅಮೋಲ್ ಶಿಂಧೆ ಮತ್ತು ನೀಲಂ ದೇವಿ - ಸಂಸತ್ತಿನ ಆವರಣದ ಹೊರಗೆ "ತಾನಾಶಾಹಿ ನಹೀ ಚಲೇಗಿ" ಎಂದು ಕೂಗುತ್ತಾ ಡಬ್ಬಿಗಳಿಂದ ಬಣ್ಣದ ಹೊಗೆ ಎರಚಿದರು. ಸಾಗರ್, ಮನೋರಂಜನ್, ಅಮೋಲ್ ಮತ್ತು ನೀಲಂ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅವರ ಸಹಚರ ವಿಶಾಲ್ ನನ್ನು ಗುರುಗ್ರಾಮ್‌ನಿಂದ ಬಂಧಿಸಲಾಗಿದ್ದು, ಅವರ ಇನ್ನೊಬ್ಬ ಸಹಚರ ಲಲಿತ್ ಝಾನ ಬಂಧನ ಕೂಡ ಆಗಿದೆ.

ಎರಡು ಬಣಗಳ ಪಾತ್ರದ ಬಗ್ಗೆ ತನಿಖೆ: ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿದಂತೆ ಬಂಧಿಸಲಾದ ನಾಲ್ವರು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಜೊತೆಗೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com