ಧರ್ಮ ಭ್ರಷ್ಟರಾಗಬೇಡಿ, ಹಲಾಲ್ ಮಾಂಸ ತಿನ್ನುವುದನ್ನು ಬಿಡಿ: ಹಿಂದೂಗಳಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕರೆ!

ಜಟ್ಕಾ ಮಾಂಸ ವಿಧಾನದಲ್ಲಿ ಪ್ರಾಣಿಯನ್ನು ಒಂದೇ ಹೊಡೆತದಲ್ಲಿ ಕೊಲ್ಲಲಾಗುತ್ತದೆ. ಇನ್ನು ಮುಂದೆ ಹಲಾಲ್ ಮಾಂಸವನ್ನು ತಿನ್ನುವ ಮೂಲಕ ನಮ್ಮ ಧರ್ಮವನ್ನು ಭ್ರಷ್ಟಗೊಳಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದು ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.
ಗಿರಿರಾಜ್ ಸಿಂಗ್
ಗಿರಿರಾಜ್ ಸಿಂಗ್

ಪಾಟ್ನಾ: ಕೆಲವು ದಿನಗಳ ಹಿಂದೆ ದೇಶಾದ್ಯಂತ ಭಾರೀ ಚರ್ಚೆಯಾಗಿದ್ದ ಹಲಾಲ್‌ ಮಾಂಸದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.  ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನುವುದನ್ನು ತ್ಯಜಿಸಬೇಕು ಮತ್ತು ಒಂದೇ ಹೊಡೆತದಿಂದ ಕೊಲ್ಲಲ್ಪಟ್ಟ ಪ್ರಾಣಿಗಳ ಮಾಂಸವಾದ ‘ಜಟ್ಕಾ’ ಮಾತ್ರ ಸೇವಿಸಬೇಕು ಎಂದು  ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕರೆ ನೀಡಿದ್ದಾರೆ.

ಬಿಹಾರದ ಬೇಗುಸರಾಯ್‌ಯಲ್ಲಿ ಭಾನುವಾರ ಮಾತನಾಡಿದ  ಅವರು,  ಜಟ್ಕಾ ಮಾಂಸ ವಿಧಾನದಲ್ಲಿ ಪ್ರಾಣಿಯನ್ನು ಒಂದೇ ಹೊಡೆತದಲ್ಲಿ ಕೊಲ್ಲಲಾಗುತ್ತದೆ. ಇನ್ನು ಮುಂದೆ ಹಲಾಲ್ ಮಾಂಸವನ್ನು ತಿನ್ನುವ ಮೂಲಕ ನಮ್ಮ ಧರ್ಮವನ್ನು ಭ್ರಷ್ಟಗೊಳಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದು ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.

ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮ ‘ಧರ್ಮ’ವನ್ನು ಹಾಳು ಮಾಡುವುದಿಲ್ಲ ಎಂದು ಅವರ ಬೆಂಬಲಿಗರು ಈ ಸಂದರ್ಭದಲ್ಲಿ ಪ್ರತಿಜ್ಞೆ ಕೈಗೊಂಡರು. ʼʼಹಲಾಲ್ ಮಾಂಸವನ್ನು ಮಾತ್ರ ಸೇವಿಸುವ ಮುಸ್ಲಿಮರನ್ನು ನಾನು ಮೆಚ್ಚುತ್ತೇನೆ. ಈಗ ಹಿಂದೂಗಳು ತಮ್ಮದೇ ಆದ ಧಾರ್ಮಿಕ ಸಂಪ್ರದಾಯಗಳಿಗೆ ಇದೇ ರೀತಿಯ ಬದ್ಧತೆಯನ್ನು ಪ್ರದರ್ಶಿಸಬೇಕುʼʼ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಹಿಂದೂ ವಧೆಯ ವಿಧಾನವೆಂದರೆ ಅದು ಜಟ್ಕಾ. ಹಿಂದೂಗಳು ಪ್ರಾಣಿ ಬಲಿ ಮಾಡಿದಾಗಲೆಲ್ಲ ಒಂದೇ ಹೊಡೆತಕ್ಕೆ ಕೊಲ್ಲುತ್ತಾರೆ. ಆದ್ದರಿಂದ ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮನ್ನು ಭ್ರಷ್ಟಗೊಳಿಸಬಾರದು. ಯಾವಾಗಲೂ ಜಟ್ಕಾ ವಿಧಾನವನ್ನೇ ಆಯ್ದುಕೊಳ್ಳಬೇಕು ಎಂದು ಗಿರಿರಾಜ್ ಸಿಂಗ್ ಕಿವಿಮಾತು ಹೇಳಿದ್ದಾರೆ. ಕಸಾಯಿಖಾನೆಗಳು ಮತ್ತು ಜಟ್ಕಾ ಮಾಂಸವನ್ನು ಮಾತ್ರ ಮಾರಾಟ ಮಾಡುವ ಅಂಗಡಿಗಳು ಇರುವ ಹೊಸ ಮಾದರಿಯ ವ್ಯವಹಾರದ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com