
ರಾಯ್‌ಪುರ: ಬಿಜೆಪಿಯ ಹಿರಿಯ ಶಾಸಕ ಹಾಗೂ ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಮಂಗಳವಾರ ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೊಸ ವಿಧಾನಸಭೆಯ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಕಲಾಪ ಆರಂಭವಾಗುತ್ತಿದ್ದಂತೆ ಹಂಗಾಮಿ ಸ್ಪೀಕರ್ ರಾಮ್‌ವಿಚಾರ್ ನೇತಮ್ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಹಾಗೂ ಜಿಜಿಪಿಯ ಒಬ್ಬ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ವಿರೋಧ ಪಕ್ಷದ ನಾಯಕ ಚರಣ್ ದಾಸ್ ಮಹಂತ್, ಉಪಮುಖ್ಯಮಂತ್ರಿಗಳಾದ ಅರುಣ್ ಸಾವೊ ಮತ್ತು ವಿಜಯ್ ಶರ್ಮಾ, ಮಾಜಿ ಸಿಎಂಗಳಾದ ರಮಣ್ ಸಿಂಗ್ ಮತ್ತು ಭೂಪೇಶ್ ಬಘೇಲ್ ಅವರು ಹಂಗಾಮಿ ಸ್ಪೀಕರ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.
ಶಾಸಕರ ಪ್ರಮಾಣ ವಚನ ಸ್ವೀಕಾರದ ನಂತರ, ಸಿಎಂ ಸಾಯಿ ಸಿಂಗ್ ಅವರು, ಸ್ಪೀಕರ್ ಆಗಿ ಆಯ್ಕೆ ಮಾಡುವ ಪ್ರಸ್ತಾವನೆಯನ್ನು ಮಂಡಿಸಿದರು. ಅದನ್ನು ಉಪ ಮುಖ್ಯಮಂತ್ರಿ ಸಾವೊ ಅವರು ಅನುಮೋದಿಸಿದರು.
ನಂತರ 71 ವರ್ಷದ ರಮಣ್ ಸಿಂಗ್ ಅವರನ್ನು ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
Advertisement