
ನವದೆಹಲಿ: ವಂಚಕ ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ದೆಹಲಿ ಹೈಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ.
ವಾರದೊಳಗೆ ಜಾಕ್ವೆಲಿನ್ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದ್ದು, ಪ್ರಕರಣದಲ್ಲಿ ಇಡಿ ಸಲ್ಲಿಸಿರುವ ಎರಡನೇ ಪೂರಕ ಚಾರ್ಜ್ ಶೀಟ್ ನಿಂದ ತನ್ನ ಹೆಸರು ಕೈಬಿಡುವಂತೆ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇರುವ ಸಂಬಂಧಿತ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಲಾಗಿದೆ.
ಆರೋಪಿ ಸುಕೇಶ್‌ಗೆ ತಾನು ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ, ಅಷ್ಟಕ್ಕೂ ಈ ಪ್ರಕರಣದಲ್ಲಿ ಜಾಕ್ವೆಲಿನ್ ಅವರನ್ನು ಸಾಕ್ಷಿಯಾಗಿ ಹೆಸರಿಸಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ವಂಚನೆಯಿಂದ ಹಣ ಗಳಿಸುವಲ್ಲಿ ಸುಕೇಶ್ ಮಾಡಿದ ಅಪರಾಧಗಳಿಗೆ ಜಾಕ್ವೆಲಿನ್ ಫರ್ನಾಂಡಿಸ್ ಯಾವುದೇ ಸಹಾಯ ಮಾಡಿಲ್ಲ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 3 ಮತ್ತು 4ರಲ್ಲಿ ಅವರಿಗೆ ಶಿಕ್ಷೆ ಆಗಬಾರದು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಅರೆಸ್ಟ್ ಆದ ಬಳಿಕ ಒಂದಷ್ಟು ಫೋಟೋಗಳು ಬಹಿರಂಗ ಆಗಿದ್ದವು. ಸುಕೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರು ಬಹಳ ಆಪ್ತವಾಗಿ ಕ್ಲಿಕ್ಕಿಸಿಕೊಂಡ ಫೋಟೋಗಳು ಲೀಕ್ ಆದವು. ಆ ಬಳಿಕ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸಂಕಷ್ಟ ಹೆಚ್ಚಾಯಿತು. ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.
Advertisement