ಇಂಡಿಯಾ ಮೈತ್ರಿಕೂಟದ ಗುರಿ ನಮ್ಮ ಸರ್ಕಾರವನ್ನು ಕಿತ್ತೊಗೆಯುವುದು, ನಮ್ಮ ಗುರಿ ದೇಶದ ಉಜ್ವಲ ಭವಿಷ್ಯ: ಪಿಎಂ ಮೋದಿ

"ನಮ್ಮ ಸರ್ಕಾರವನ್ನು ಹೊರಹಾಕುವುದು ಇಂಡಿಯಾ ಬ್ಲಾಕ್‌ನ ಗುರಿಯಾಗಿದೆ, ನಮ್ಮ ಸರ್ಕಾರದ ಗುರಿ ದೇಶಕ್ಕೆ ಉಜ್ವಲ ಭವಿಷ್ಯವನ್ನು ಸೃಷ್ಟಿಸುವುದು" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ನವದೆಹಲಿ: ನಮ್ಮ ಸರ್ಕಾರವನ್ನು ಹೊರಹಾಕುವುದು ಇಂಡಿಯಾ ಬ್ಲಾಕ್‌ನ ಗುರಿಯಾಗಿದೆ, ನಮ್ಮ ಸರ್ಕಾರದ ಗುರಿ ದೇಶಕ್ಕೆ ಉಜ್ವಲ ಭವಿಷ್ಯವನ್ನು ಸೃಷ್ಟಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ಮಂಗಳವಾರ ನಡೆಯುತ್ತಿರುವ ಇಂಡಿಯಾ ಬ್ಲಾಕ್‌ನ ಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಈ ಹೇಳಿಕೆ ಬಂದಿದೆ. 

ಕೆಲವು ಪಕ್ಷಗಳು ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆಗೆ ಬೆಂಬಲ ನೀಡುತ್ತವೆ; ಇದು ಉಲ್ಲಂಘನೆಯಷ್ಟೇ ಅಪಾಯಕಾರಿ ಎಂದು ಪ್ರಧಾನಿ ಮೋದಿ ಇಂದು ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ಹೇಳಿದರು. 

ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳ ಪ್ರತಿಯೊಬ್ಬರೂ ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆಯನ್ನು ಜಂಟಿಯಾಗಿ ಖಂಡಿಸಬೇಕಿತ್ತು. ಪ್ರತಿಪಕ್ಷಗಳ ನಡವಳಿಕೆಯು 2024 ರ ಚುನಾವಣೆಯಲ್ಲಿ ಅದರ ಸಂಖ್ಯೆಯು ಕಡಿಮೆಯಾಗುತ್ತದೆ ಎಂದು ತೋರಿಸುತ್ತದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸಂಖ್ಯೆ ಲೋಕಸಭೆಯಲ್ಲಿ ಹೆಚ್ಚಾಗುತ್ತದೆ ಎಂದರು. 

ಡಿಸೆಂಬರ್ 13 ರ ಭದ್ರತಾ ಉಲ್ಲಂಘನೆಯ ಬಗ್ಗೆ ಸಂಸತ್ತಿನಲ್ಲಿ ನಿನ್ನೆ ಭಾರೀ ಗದ್ದಲ-ಕೋಲಾಹಲ ನಂತರ ಅಂತಿಮವಾಗಿ 78 ಸಂಸದರನ್ನು ಅಮಾನತುಗೊಳಿಸಲಾಯಿತು, ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಒಂದೇ ದಿನದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಂಸದರನ್ನು ಹೊರಹಾಕಲಾಗಿದೆ. 

ವಿರೋಧ ಪಕ್ಷಗಳ ಬೆಂಬಲವಿದೆ: ಸಂಸತ್ತಿನ ಭದ್ರತಾ ಲೋಪ ವಿಚಾರವಾಗಿ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿಯವರು, ಆರೋಪಿಗಳಿಗೆ ವಿರೋಧ ಪಕ್ಷಗಳ ಬೆಂಬಲವಿದೆ. ಆರೋಪಿಗಳನ್ನು ಪ್ರತಿಪಕ್ಷಗಳು ಬೆಂಬಲಿಸುವುದು ಬಹಳ ಅಪಾಯಕಾರಿ. ಸಂಸತ್ತಿನ ಭದ್ರತೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ವರ್ತನೆ ಸರಿಯಲ್ಲ. ಪ್ರತಿಪಕ್ಷಗಳ ವರ್ತನೆ ಬೇಸರ ಉಂಟುಮಾಡಿದೆ ಎಂದರು. 

ಒಳ್ಳೆಯ ಮತ್ತು ಸಕಾರಾತ್ಮಕ ಕೆಲಸ ಮಾಡಲು ಕೆಲವರಿಗೆ ಮನಸಿಲ್ಲ. ಋಣಾತ್ಮಕ ರಾಜಕಾರಣ ಮಾಡುತ್ತಿರುವುದರಿಂದ 2024ರಲ್ಲೂ ಪ್ರತಿಪಕ್ಷಗಳು ಸೋಲು ಅನುಭವಿಸಬೇಕಾಗಲಿದೆ ಎಂದರು. ಕೋಪ ಮತ್ತು ಹತಾಶೆಯಿಂದ ಪ್ರತಿಪಕ್ಷಗಳು ದೊಡ್ಡ ತಪ್ಪು ಮಾಡುತ್ತಿವೆ. ಕೆಲವು ಹಿರಿಯ ಅಸ್ವಸ್ಥ ನಾಯಕರು ಕೂಡ ಬಿಜೆಪಿಯನ್ನು ತೆಗೆದುಹಾಕುವ ಹೆಸರಿನಲ್ಲಿ ದೇಶದ ವಿರುದ್ಧವೇ ಸಕ್ರಿಯರಾಗಿದ್ದಾರೆ ಎಂದು ಟೀಕಿಸಿದರು. 

ಪ್ರತಿಪಕ್ಷಗಳು ತಮ್ಮ ಸ್ಥಾನದಲ್ಲೇ ಉಳಿಯಲು ಮನಸ್ಸು ಮಾಡಿವೆ ಎಂದು ತೋರುತ್ತದೆ. ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಿದವರ ಪರವಾಗಿ ಕೆಲವು ಪಕ್ಷಗಳು ಧ್ವನಿ ಎತ್ತುತ್ತಿವೆ. ಇದು ಕಳ್ಳತನದಷ್ಟೇ ಅಪಾಯಕಾರಿ ಮತ್ತು ಅತ್ಯಂತ ದುರದೃಷ್ಟಕರ ಎಂದರು.

ಇಂದಿನ 18 ವರ್ಷದ ಮತದಾರರಿಗೆ 2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ 8 ವರ್ಷವಾಗಿತ್ತು. ಅವರು ಹಗರಣಗಳ ಯುಗವನ್ನು ನೋಡಿಲ್ಲ. ಅವರು ಅಭಿವೃದ್ಧಿಯ ಯುಗವನ್ನು ನೋಡುತ್ತಿದ್ದಾರೆ. ಈ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು. ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಎಂದು ಮೋದಿ ಕರೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com