ವಧುವಿನ ಕಡೆಯವರ ಮಟನ್ ಊಟದಲ್ಲಿ 'ನಲ್ಲಿ ಮೂಳೆ' ಇಲ್ಲವೆಂದು ಮುರಿದು ಬಿದ್ದ ಮದುವೆ!

ವಧುವಿನ ಕಡೆಯವರು ನಿರ್ಧರಿಸಿದ ಮಾಂಸಾಹಾರದ ಊಟದ ಮೆನುವಿನಲ್ಲಿ ನಲ್ಲಿ ಮಟನ್ ಮೂಳೆ ಇಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವರ ಮನೆಯವರು ಮದುವೆಯನ್ನೇ ರದ್ದುಗೊಳಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಹೈದರಾಬಾದ್: ವಧುವಿನ ಕಡೆಯವರು ನಿರ್ಧರಿಸಿದ ಮಾಂಸಾಹಾರದ ಊಟದ ಮೆನುವಿನಲ್ಲಿ ನಲ್ಲಿ ಮಟನ್ ಮೂಳೆ ಇಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವರ ಮನೆಯವರು ಮದುವೆಯನ್ನೇ ರದ್ದುಗೊಳಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ನಿಜಾಮಾಬಾದ್‌ನ ಹುಡುಗಿ ಮತ್ತು ಜಗ್ತಿಯಾಳ್‌ನ ಹುಡುಗನ ಮದುವೆ ನಿಶ್ಚಯವಾಗಿತ್ತು. ನಿಜಾಮಾಬಾದ್‌ನಲ್ಲಿರುವ ವಧುವಿನ ಮನೆಯಲ್ಲಿ ನಿಶ್ಚಿತಾರ್ಥ ನಡೆದಿತ್ತು. ಅದ್ದೂರಿಯಾಗಿ ಮದುವೆ ಮಾಡುವ ಬಗ್ಗೆ ಎರಡೂ ಕುಟುಂಬಗಳ ನಡುವೆ ಮಾತುಕತೆಯಾಗಿತ್ತು.

ತಮ್ಮ ಕುಟುಂಬದ ಸದಸ್ಯರು ಹಾಗೂ ವರದ ಸಂಬಂಧಿಕರು ಸೇರಿದಂತೆ ಅತಿಥಿಗಳಿಗಾಗಿ ವಧುವಿನ ಕುಟುಂಬವು ಮಾಂಸಾಹಾರದ ಮೆನು ಸಿದ್ಧಪಡಿಸಿತ್ತು. ನಿಶ್ಚಿತಾರ್ಥದ ಬಳಿಕ ಗಮ್ಮತ್ತು ಊಟ ಬಾರಿಸಲು ಸಿದ್ಧರಾಗಿದ್ದಾಗ ಜಗಳ ಶುರುವಾಗಿದೆ. ನಲ್ಲಿ ಮೂಳೆಯನ್ನು (ಮಟನ್‌ನ ಮೂಳೆ ಮಜ್ಜೆ) ಬಡಿಸುತ್ತಿಲ್ಲ ಎಂದು ಕೆಲವು ಅತಿಥಿಗಳು ತಗಾದೆ ತೆಗೆದಿದ್ದಾರೆ. ಆಗ ವಧುವಿನ ಕಡೆಯವರು, ನಮ್ಮ ಖಾದ್ಯಗಳ ಪಟ್ಟಿಯಲ್ಲಿ ನಲ್ಲಿ ಮೂಳೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆಗ ಕಿತ್ತಾಟ ಮತ್ತಷ್ಟು ಜೋರಾಗಿದೆ.

ತಮಗೆ ಸರಿಯಾಗಿ ಊಟೋಪಚಾರ ನೀಡದೆ ವಧುವಿನ ಕಡೆಯವರು ಅವಮಾನಿಸಿದ್ದಾರೆ ಎಂದು ಗಂಡಿನ ಕಡೆಯವರು ರಂಪಾಟ ನಡೆಸಿದ್ದಾರೆ. ಈ ಜಗಳ ತೀವ್ರಗೊಳ್ಳುತ್ತಿದ್ದಂತೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಜಗಳವನ್ನು ನಿಲ್ಲಿಸಿ, ಎರಡೂ ಕಡೆಯವರನ್ನು ಸಮಾಧಾನಪಡಿಸಲು ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಅವರ ಅವರ ಮನವೊಲಿಕೆ ಪ್ರಯತ್ನಗಳಿಗೆ ವರನ ಕಡೆಯವರು ಕಿವಿಗೊಟ್ಟಿಲ್ಲ. ಇದು ತಮಗೆ ಮಾಡಿದ 'ಅವಮಾನ' ಎಂದು ಕೂಗಾಟ ಮುಂದುವರಿಸಿದ್ದಾರೆ.

ಊಟದ ಮೆನುವಿನಲ್ಲಿ ನಲ್ಲಿ ಮೂಳೆ ಇರುವುದಿಲ್ಲ ಎಂಬ ಅಂಶವನ್ನು ಹುಡುಗಿಯ ಕಡೆಯವರು ಉದ್ದೇಶಪೂರ್ವಕವಾಗಿಯೇ ತಮ್ಮಿಂದ ಮುಚ್ಚಿಟ್ಟಿದ್ದಾರೆ ಎಂದು ಹುಡುಗನ ಸಂಬಂಧಿಕರು ಆರೋಪಿಸಿದ್ದಾರೆ. ಇಷ್ಟೆಲ್ಲಾ ರಂಪಾಟ ನಡೆಸಿದ ಬಳಿಕ ಮದುವೆಯ ಬಗ್ಗೆ ಆಲೋಚಿಸಲು ಸಾಧ್ಯವೇ? ತಮಗೆ ಈ ಸಂಬಂಧವೇ ಬೇಡ ಎಂದು ವರದ ಕಡೆಯವರು ಮದುವೆಯನ್ನು ರದ್ದು ಮಾಡಿದ್ದಾರೆ. ಇದರೊಂದಿಗೆ ಕೊನೆಗೂ ಅವರ ಜಗಳ ಕೊನೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com