ನವದೆಹಲಿ: ಭಾರತದ ಪ್ರಮುಖ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಾದ(ಐಐಟಿ)ಗಳಲ್ಲಿ 4,000ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದೆ.
ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 6,000ಕ್ಕೂ ಹೆಚ್ಚು ಬೋಧಕ ಮತ್ತು 15,798 ಬೋಧಕೇತರ ಹುದ್ದೆಗಳು ಖಾಲಿಯಿದ್ದರೆ, ಕೇಂದ್ರೀಯ ವಿದ್ಯಾಲಯಗಳಲ್ಲಿ 12,000ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇವೆ ಎಂದು ಶಿಕ್ಷಣ ಖಾತೆ ರಾಜ್ಯ ಸಚಿವ ಡಾ.ಸುಭಾಸ್ ಸರ್ಕಾರ್ ಅವರು ತಿಳಿಸಿದ್ದಾರೆ.
ಇಂದು ಲೋಕಸಭೆಗೆ ಲಿಖಿತ ಉತ್ತರ ನೀಡಿದ ಡಾ.ಸುಭಾಸ್ ಸರ್ಕಾರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ(ಐಐಎಂ) 484 ಬೋಧಕ ಹುದ್ದೆಗಳು ಖಾಲಿಯಿದ್ದರೆ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ/ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ 2,089 ಬೋಧಕ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ ಎಂದಿದ್ದಾರೆ.
ಜವಾಹರ್ ನವೋದಯ ವಿದ್ಯಾಲಯಗಳಲ್ಲಿ(ಜೆಎನ್‌ವಿ) 3271 ಬೋಧಕ ಹುದ್ದೆಗಳು ಖಾಲಿ ಇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್‌ಗಳಲ್ಲಿ 353 ಬೋಧಕ ಹುದ್ದೆಗಳು ಖಾಲಿಯಿದ್ದರೂ, ಎಲ್ಲಾ IISER ಗಳಿಗೆ ಜನವರಿಯಲ್ಲಿ 225 ಅಧ್ಯಾಪಕ ಹುದ್ದೆಗಳ ನೇಮಕಕ್ಕೆ ಇತ್ತೀಚೆಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.
Advertisement