ಬುಲೆಟ್ ರೈಲು ಯೋಜನೆ ರಾಷ್ಟ್ರೀಯ ಮಹತ್ವದ್ದು: ಭೂಸ್ವಾಧೀನ ವಿರೋಧಿಸಿದ್ದ ಅರ್ಜಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್ 

ಬುಲೆಟ್ ರೈಲು ಯೋಜನೆಯನ್ನು ರಾಷ್ಟ್ರೀಯ ಮಹತ್ವದ ಯೋಜನೆ ಹಾಗೂ ಸಾರ್ವಜನಿಕರ ಹಿತಾಸಕ್ತಿಯ ಯೋಜನೆ ಎಂದು ಹೇಳಿರುವ ಬಾಂಬೆ ಹೈಕೋರ್ಟ್, ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಬುಲೆಟ್ ರೈಲು
ಬುಲೆಟ್ ರೈಲು

ಮುಂಬೈ: ಮುಂಬೈ- ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಯನ್ನು ರಾಷ್ಟ್ರೀಯ ಮಹತ್ವದ ಯೋಜನೆ ಹಾಗೂ ಸಾರ್ವಜನಿಕರ ಹಿತಾಸಕ್ತಿಯ ಯೋಜನೆ ಎಂದು ಹೇಳಿರುವ ಬಾಂಬೆ ಹೈಕೋರ್ಟ್, ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಗೋದ್ರೇಜ್ & ಬಾಯ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಎನ್ ಹೆಚ್ಎಸ್ ಆರ್ ಸಿಎಲ್ ಹಾಗೂ ಮಹಾರಾಷ್ಟ್ರ ಸರ್ಕಾರ ಈ ಯೋಜನೆಗಾಗಿ ಸಬ್ ಅರ್ಬನ್ ವಿಖ್ರೋಲಿಯಲ್ಲಿ ಪ್ರಾರಂಭಿಸಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಗೋದ್ರೇಜ್ & ಬಾಯ್ಸ್ ಕಂಪನಿ ಮುಂಬೈ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. 

ಈ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿಯುಳ್ಳ ಇಡೀ ಯೋಜನೆ ವಿಳಂಬವಾಗುವಂತೆ ಮಾಡುತ್ತಿದೆ ಎಂದು ಮಹಾರಾಷ್ಟ್ರ ಹಾಗೂ ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ (ಎನ್ ಹೆಚ್ ಎಸ್ ಆರ್ ಸಿಎಲ್) ವಾದ ಮಂಡಿಸಿತ್ತು.

ಆರ್ ಡಿ ಧನುಕಾ ಹಾಗೂ ಎಂಎಂ ಸಾಥಯೇ ಅವರಿದ್ದ ವಿಭಾಗೀಯ ಪೀಠ, ಈ ಯೋಜನೆ ಖಾಸಗಿ ಹಿತಾಸಕ್ತಿಗಳಿಗಿಂತ ಸಾರ್ವಜನಿಕ ಹಿತಾಸಕ್ತಿಗಳ ಪರವಾಗಿದೆ ಎಂದು ಹೇಳಿದೆ. 

ಬುಲೆಟ್ ರೈಲು ಯೋಜನೆಗಾಗಿ ಭೂಸ್ವಾಧೀನ ಪಡಿಸಿಕೊಂಡಿದ್ದಕ್ಕೆ ಮಹಾರಾಷ್ಟ್ರ ಸರ್ಕಾರ ತನ್ನ ಸಂಸ್ಥೆಗೆ ನೀಡಿದ ಪರಿಹಾರವನ್ನು ಪ್ರಶ್ನಿಸಿ ಗೋದ್ರೇಜ್ & ಬಾಯ್ಸ್ ಕಂಪನಿ 2022 ರ ಸೆ.15 ರಂದು ಅರ್ಜಿ ಸಲ್ಲಿಸಿತ್ತು. ಸರ್ಕಾರ ಪ್ರಾರಂಭಿಸಿರುವ ಭೂಸ್ವಾಧೀನ ಪ್ರಕ್ರಿಯೆ, ಅಕ್ರಮವಾಗಿದ್ದು ಹಲವಾರು ಮತ್ತು ಪೇಟೆಂಟ್ ಅಕ್ರಮಗಳು ಪ್ರಕ್ರಿಯೆಯಲ್ಲಿವೆ ಎಂದು ವಾದಿಸಿತ್ತು.

ಪರಿಹಾರ ಅಥವಾ ಪ್ರಕ್ರಿಯೆಗಳಲ್ಲಿ ಅಕ್ರಮಗಳು ಕಾಣುತ್ತಿಲ್ಲ ಎಂದು ನ್ಯಾಯಪೀಠ ಹೇಳಿದ್ದು, ಈ ಯೋಜನೆ ಖಾಸಗಿ ಹಿತಾಸಕ್ತಿಗಳಿಗಿಂತ ಸಾರ್ವಜನಿಕ ಹಿತಾಸಕ್ತಿಗಳ ಪರವಾಗಿದೆ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಿಲೇವಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com