ನೀವೆಲ್ಲ ಸೇರಿ ನನ್ನೊಬ್ಬನನ್ನು ಎದುರಿಸುತ್ತಿದ್ದೀರಿ; ದೇಶವೇ ಇದನ್ನು ನೋಡುತ್ತಿದೆ: ಎದೆತಟ್ಟಿ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಗುಡುಗು

ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ರೋಷಾವೇಷದಿಂದ ವಾಗ್ದಾಳಿ ನಡೆಸಿದರು. ವಿಪಕ್ಷಗಳು ಎಷ್ಟೇ ಆರೋಪ ಮಾಡಿದರೂ, ಕೆಸರು ಎರಚಿದಷ್ಟೂ ಕಮಲ ಮತ್ತಷ್ಟು ಅರಳುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ರೋಷಾವೇಷದಿಂದ ವಾಗ್ದಾಳಿ ನಡೆಸಿದರು. ವಿಪಕ್ಷಗಳು ಎಷ್ಟೇ ಆರೋಪ ಮಾಡಿದರೂ, ಕೆಸರು ಎರಚಿದಷ್ಟೂ ಕಮಲ ಮತ್ತಷ್ಟು ಅರಳುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಇಡೀ ಪ್ರತಿಪಕ್ಷಗಳು ನನ್ನೊಬ್ಬನಿಗೆ ಸಮ ಅಲ್ಲ ಎಂದು ಎದೆ ತಟ್ಟಿಕೊಂಡು ಗುಡುಗಿದರು. 

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಒಬ್ಬ ವ್ಯಕ್ತಿ ಹೇಗೆ ಹಲವರನ್ನು ಬಲವಾಗಿ ಎದುರಿಸುತ್ತಿದ್ದಾನೆ ಎಂಬುದನ್ನು ರಾಷ್ಟ್ರ ಗಮನಿಸುತ್ತಿದೆ. ವಿರೋಧ ಪಕ್ಷಗಳು ನನ್ನ ವಿರುದ್ಧ ಹೊಸ ಘೋಷಣೆಗಳನ್ನು ಹುಡುಕಬೇಕಿದೆ. ನಾನು ದೇಶಕ್ಕಾಗಿ ಬದುಕುವುದನ್ನು ಮುಂದುವರೆಸುತ್ತೇನೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದರು.

ತನನ್ನು ಎದುರಿಸಲಾಗದೆ ರಾಜಕೀಯ ವಿರೋಧಿಗಳು ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡುತ್ತಾ ಹೋದರು.

ಸ್ವಾತಂತ್ರ್ಯ ನಂತರ ದೇಶ ಕಟ್ಟುವಲ್ಲಿ ಜವಹರ್ ಲಾಲ್ ನೆಹರು ಅವರ ಪ್ರಯತ್ನಗಳನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂಬ ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ನೆಹರೂ ಅತ್ಯುತ್ತಮ ನಾಯಕರಾದರೆ ಅವರ ತಲೆಮಾರಿನ ಜನರು, ನೆಹರೂ ಅನ್ನು ತಮ್ಮ ಉಪನಾಮವಾಗಿ ಏಕೆ ಇಟ್ಟುಕೊಳ್ಳುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ, ಭಯ ಮತ್ತು ನಾಚಿಕೆ ಏನು? ಗಾಂಧಿ ಕುಟುಂಬವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ಪ್ರತಿಪಕ್ಷಗಳು ದೇಶದ ಕಲ್ಯಾಣಕ್ಕಿಂತ ಕೇವಲ ರಾಜಕೀಯ ಮಹತ್ವಕಾಂಕ್ಷೆಯ ಬಗ್ಗೆ ಮಾತನಾಡುತ್ತಿವೆ. ನಾವು ದೇಶವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದೇವೆ. ನಮ್ಮ ನೀತಿಗಳು ರಾಷ್ಟ್ರ ಹಾಗೂ ಪ್ರಾದೇಶಿಕ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತಿವೆ. ಆದರೆ, ಕಾಂಗ್ರೆಸ್ ಪಕ್ಷ ಇದೀಗ ದೇಶವನ್ನು ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. 

ಸರಕಾರದ 600 ಕಾರ್ಯಕ್ರಮಗಳು ಗಾಂಧಿ-ನೆಹರೂ ಕುಟುಂಬದವರ ಹೆಸರುಗಳಲ್ಲಿವೆ ಎಂದು ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್ ಕೋವಿಡ್-19 ಲಸಿಕೆ ಕಂಡುಹಿಡಿದ ಭಾರತೀಯ ವಿಜ್ಞಾನಿಗಳನ್ನು ಅಪಮಾನಿಸಿದೆ. ಅವರ ಆಡಳಿತ ಅವಧಿಯಲ್ಲಿ ಬುಡಕಟ್ಟು ಸಮುದಾಯ, ಸಣ್ಣ ಮತ್ತು ಅತಿ ಸಣ್ಣ ರೈತರನ್ನು ನಿರ್ಲಕ್ಷಿಸಲಾಗಿತ್ತು ಎಂದು ಆರೋಪಿಸಿದರು. 

ತಮ್ಮ ವಿರುದ್ಧದ ಪ್ರತಿಪಕ್ಷಗಳು ಆರೋಪ ಮಾಡುವಾಗ ಕೆಲ ಜನರ ವರ್ತನೆ ಮತ್ತು ಭಾಷೆ ಸದನಕ್ಕೆ ನಿರಾಸೆಯನ್ನುಂಟು ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನಂತರ ಧ್ವನಿ ಮತದೊಂದಿಗೆ ರಾಷ್ಟ್ರಪತಿಗಳ ವಂದನಾ ನಿರ್ಣಯವನ್ನು ಅಂಗೀಕರಿಸಲಾಯಿತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com