ಮಾರ್ಚ್ 20 ರಂದು ಸಂಸತ್ ಭವನದ ಹೊರಗೆ ಮಹಾಪಂಚಾಯತ್ ಆಯೋಜನೆ: ಎಸ್ ಕೆಎಂ

ಕನಿಷ್ಠ ಬೆಂಬಲ ಬೆಲೆಯನ್ನು ಕಡ್ಡಾಯಗೊಳಿಸಲು ಕಾನೂನು ಜಾರಿಗೆ ತರುವಂತೆ ಒತ್ತಾಯಿಸಲು ಮಾರ್ಚ್ 20 ರಂದು ಸಂಸತ್ತಿನ ಹೊರಗೆ 'ಕಿಸಾನ್ ಮಹಾಪಂಚಾಯತ್' ನಡೆಸುವುದಾಗಿ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ...
ರೈತಪರ ನಾಯಕರು.
ರೈತಪರ ನಾಯಕರು.

ನವದೆಹಲಿ: ಕನಿಷ್ಠ ಬೆಂಬಲ ಬೆಲೆಯನ್ನು ಕಡ್ಡಾಯಗೊಳಿಸಲು ಕಾನೂನು ಜಾರಿಗೆ ತರುವಂತೆ ಒತ್ತಾಯಿಸಲು ಮಾರ್ಚ್ 20 ರಂದು ಸಂಸತ್ತಿನ ಹೊರಗೆ 'ಕಿಸಾನ್ ಮಹಾಪಂಚಾಯತ್' ನಡೆಸುವುದಾಗಿ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆಎಂ) ಗುರುವಾರ ಹೇಳಿದೆ.

ಕುರುಕ್ಷೇತ್ರದ ಜಾಟ್ ಭವನದಲ್ಲಿ ಯುಧವೀರ್ ಸಿಂಗ್, ರಾಜಾ ರಾಮ್ ಸಿಂಗ್ ಮತ್ತು ಡಾ ಸುನೀಲಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಸ್ ಕೆಎಂ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಕೇಂದ್ರ ಬಜೆಟ್ ಅನ್ನು "ರೈತ ವಿರೋಧಿ" ಎಂದು ಎಸ್ ಕೆಎಂ ಟೀಕಿಸಿದೆ.

ಫೆಬ್ರವರಿ 1 ರಂದು ಮಂಡಿಸಿದ ಬಜೆಟ್‌ನಲ್ಲಿ ರೈತರು, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ ಮತ್ತು MNREGA ಗೆ ಸಂಬಂಧಿಸಿದ ಹಣದಲ್ಲಿ "ತೀವ್ರ ಕಡಿತ" ಮಾಡಲಾಗಿದೆ ಎಂದು ಎಸ್ ಕೆಎಂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್ ಕೆಎಂ ಈಗ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸುತ್ತಿದೆ.

ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು, ರೈತರಿಗೆ 5,000 ರೂಪಾಯಿ ಮಾಸಿಕ ಪಿಂಚಣಿ, ಸಾಲ ಮನ್ನಾ, ಲಖೀಂಪುರ ಖೇರಿ ಹಿಂಸಾಚಾರದಲ್ಲಿ ಆರೋಪಿಯಾಗಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವುದು ಮತ್ತು ಮೃತ ರೈತರಿಗೆ ಪರಿಹಾರ ನೀಡುವುದು ಅವರ ಇತರ ಬೇಡಿಕೆಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com