ಕ್ರಿಕೆಟ್ ಆಡುವ ವೇಳೆ ಜ್ಯೋತಿರಾದಿತ್ಯ ಸಿಂಧಿಯಾ ಹೊಡೆದ ಚೆಂಡು ಬಿಜೆಪಿ ಕಾರ್ಯಕರ್ತನ ತಲೆಗೆ ಬಡಿದು ಗಾಯ!
ಭೋಪಾಲ್: ನೂತನವಾಗಿ ನಿರ್ಮಿಸಲಾದ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾಟದ ವೇಳೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಹೊಡೆದ ಬಾಲ್ ಬಿಜೆಪಿ ಕಾರ್ಯಕರ್ತನ ತಲೆಗೆ ಬಡಿದು ರಕ್ತಸ್ರಾವ ಉಂಟಾದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ಹೊಸದಾಗಿ ನಿರ್ಮಿಸಿದ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು. ಈ ವೇಳೆ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾರ್ಯಕರ್ತರ ಒತ್ತಾಯದ ಮೇರೆಗೆ ಕ್ರಿಕೆಟ್ ಆಡಲು ನಿರ್ಧರಿಸಿದ್ದಾರೆ. ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬ್ಯಾಟಿಂಗ್ ಮಾಡುವ ವೇಳೆ ತನ್ನ ಬ್ಯಾಟ್‌ನಲ್ಲಿ ಬಾಲ್ ಹೊಡೆದಿದ್ದಾರೆ.
ಎತ್ತರಕ್ಕೆ ಹಾರಿದ ಬಾಲ್ ಅಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತ ವಿಕಾಸ್ ಮಿಶ್ರಾ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಚೆಂಡು ಅವರ ಕೈ ತಪ್ಪಿದ ಕಾರಣ ತಲೆಯಿಂದ ಹಣೆಗೆ ಬಿದ್ದು ಗಾಯವಾಗಿದೆ. ಬಾಲ್ ಬಿದ್ದ ಹೊಡೆತಕ್ಕೆ ತಲೆಯಲ್ಲಿ ಗಾಯವಾಗಿ ರಕ್ತಸ್ರಾವವಾಗಿದ್ದು, ಕೂಡಲೇ ಆತನನ್ನು ಅಲ್ಲಿದ್ದವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸದ್ಯ ಗಾಯಗೊಂಡಿರುವ ಬಿಜೆಪಿ ಕಾರ್ಯಕರ್ತ ವಿಕಾಸ್ ಮಿಶ್ರಾಗೆ ವೈದ್ಯರು ಚಿಕಿತ್ಸೆ ನೀಡಿದ್ದು, ಗಾಯಗೊಂಡ ಜಾಗದಲ್ಲಿ ವೈದ್ಯರು ಹಲವಾರು ಹೊಲಿಗೆಗಳನ್ನು ಹಾಕಿದ್ದಾರೆ. ಸದ್ಯ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಧ್ಯಪ್ರದೇಶದ ಇಟೌರಾದಲ್ಲಿ ಹೊಸದಾಗಿ ನಿರ್ಮಿಸಲಾದ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದ್ದು, ಅಂದೇ ಕ್ರೀಡಾಂಗಣದ ಉದ್ಘಾಟನೆಯನ್ನು ಇಟ್ಟುಕೊಳ್ಳಲಾಗಿತ್ತು. ಸ್ಟೇಡಿಯಂ ಉದ್ಘಾಟನೆಗೊಂಡ ಬಳಿಕ ಸೌಹಾರ್ದ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ವೇಳೆ ಅಚಾತುರ್ಯದಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯ ಬಿಜೆಪಿ ಕಾರ್ಯಾಧ್ಯಕ್ಷ ಧೀರಜ್ ದ್ವಿವೇದಿ ತಿಳಿಸಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ ಅವರು ಹೊಡೆದ ಬಾಲ್ ತಗುಲಿ ಗಾಯಗೊಂಡ ಬಿಜೆಪಿ ಕಾರ್ಯಕರ್ತ ವಿಕಾಸ್ ಮಿಶ್ರಾನನ್ನು ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸುವಾಗ ಮಾಜಿ ಸಚಿವ ರಾಜೇಂದ್ರ ಶುಕ್ಲಾ ಮತ್ತು ರೇವಾ ಸಂಸದ ಜನಾರ್ದನ್ ಮಿಶ್ರಾ ಅವರೊಂದಿಗೆ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಹಾಜರಿದ್ದರು. ಪಂದ್ಯಾಟ ವೇಳೆ ಅಚಾತುರ್ಯ ಘಟನೆ ನಡೆದ ಬಳಿಕ ಕ್ರೀಡಾಕೂಟವನ್ನು ನಿಲ್ಲಿಸಲಾಯಿತು ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ