ಅಜ್ನಾಲಾ ಘಟನೆ: ಕೇಂದ್ರ ಮಧ್ಯಸ್ಥಿಕೆ ವಹಿಸಬೇಕು- ಅಮರೀಂದರ್ ಸಿಂಗ್
ಪಂಜಾಬ್: ಅಜ್ನಾಲಾ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಒಂದು ವೇಳೆ ಆಮ್ ಆದ್ಮಿ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ, ಪರಿಸ್ಥಿತಿ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸದ್ಯ ಪಂಜಾಬ್ ನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮುಖ್ಯಮಂತ್ರಿ ಭಗವಂತ್ ಮಾನ್ ಆಸಕ್ತಿ ತೋರುತ್ತಿಲ್ಲ. ಯಾವುದೇ ಕ್ರಮ ತೆಗೆದುಕೊಳ್ಳಲು ಭಯ ಪಡೆಯುತ್ತಿದ್ದಾರೆ. ಅಜ್ನಾಲಾ ಘಟನೆ ವೇಳೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿರುವ ಸಾಧ್ಯತೆಯಿದೆ. ಪಂಜಾಬ್ ನಲ್ಲಿ ಕಾನೂನು ಮತ್ತುಸುವ್ಯವಸ್ಥೆ ಕ್ಷೀಣಿಸಿದೆ ಎಂದು ಅಮರೀಂದರ್ ಹೇಳಿದರು.
ಪಂಜಾಬ್ ಸರ್ಕಾರದ ರೀತಿ ಯಾವುದೇ ಸರ್ಕಾರ ನಡೆದುಕೊಂಡಿಲ್ಲ. ಅಜ್ನಾಲಾ ಘಟನೆ ನಡೆದ ದಿನ ಭಗವಂತ್ ಮಾನ್ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಮುಂಬೈನಲ್ಲಿ ಕುಳಿತಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಸಿಎಂ ಭಗವಂತ್ ಮಾನ್ ಶುಕ್ರವಾರ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸಕ್ಕೆ ತೆರಳಿದ್ದರು. ಪಂಜಾಬ್ ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಭಯಾನಕವಾಗಿದ್ದು, ಪಂಜಾಬ್ ಸರ್ಕಾರದಿಂದ ಪರಿಸ್ಥಿತಿ ನಿರ್ವಹಿಸಲು ಸಾಧ್ಯವಾಗದಿದ್ದರೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಅಮರೀಂದರ್ ಹೇಳಿದರು.
ಲವ್ ಪ್ರೀತ್ ಸಿಂಗ್ ತೂಪನ್ ಬಂಧನ ವಿರೋಧಿಸಿ ಗುರುವಾರ ಖಲಿಸ್ತಾನ ಹೋರಾಟಗಾರ ಅಮೃತ್ ಪಾಲ್ ಸಿಂಗ್ ಅವರು ಸಾವಿರಾರು ಬೆಂಬಲಿಗರು ಗುರುವಾರ ಅಮೃತಸರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಕೈಯಲ್ಲಿ ಕತ್ತಿ ಮತ್ತು ಬಂದೂಕುಗಳನ್ನು ಹಿಡಿದಿದ್ದ ಬೆಂಬಲಿಗರು ಅಜ್ನಾಲಾ ಪೊಲೀಸ್ ಠಾಣೆಯ ಹೊರಗೆ ಹಾಕಲಾಗಿದ್ದ ಪೊಲೀಸ್ ಬ್ಯಾರಿಕೇಡ್ ಕಿತ್ತು ಎಸೆದು ರಂಪ ರಾದ್ದಾಂತ ಮಾಡಿದ್ದರು. ನಂತರ ಪೊಲೀಸರು ಲವ್ ಪ್ರೀತ್ ಸಿಂಗ್ ತೂಫಾನ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು. ಅಜ್ನಾಲಾ ನ್ಯಾಯಾಲಯದ ಆದೇಶದ ಮೇರೆಗೆ ಲವ್‌ಪ್ರೀತ್ ಸಿಂಗ್ ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ