ನವದೆಹಲಿ: ಸ್ಟ್ಯಾಂಡ್‌ಅಪ್ ಹಾಸ್ಯನಟ ಕುನಾಲ್ ಕಾಮ್ರಾ ಅವರಿಗೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣವೊಂದರ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಹಿಂದೆ ಸರಿದಿದ್ದಾರೆ. ಸಿಐಜೆ ನೇತೃತ್ವದ ನ್ಯಾಯಪೀಠ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
''ನಾನು ನೀಡಿದ್ದ ಆದೇಶದ ವಿರುದ್ಧ ಟ್ವೀಟ್ ಮಾಡಿರುವುದರಿಂದ ತಾನಿಲ್ಲದ ನ್ಯಾಯಪೀಠ ಮುಂದೆ ಈ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ಎರಡು ವಾರಗಳ ನಂತರ ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠ, ಈ ಪ್ರಕರಣದ ವಿಚಾರಣೆ ನಡೆಸಲಿದೆ.
ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಬಂಧಿತರಾಗಿದ್ದ ಟಿ.ವಿ. ಆ್ಯಂಕರ್ ಅರ್ನಾಬ್ ಗೋಸ್ವಾಮಿ ಅವರಿಗೆ ಜಾಮೀನು ನೀಡಿದ ಸುಪ್ರೀಂ ತೀರ್ಪನ್ನು ಕುನಾಲ್ ಕಾಮ್ರಾ ಅವರು ಟೀಕೆ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು.
ಅರ್ನಬ್ ಗೋಸ್ವಾಮಿ ಅವರ ಕಠಿಣ ಟೀಕಾಕಾರರಾಗಿರುವ ಕುನಾಲ್ ಕಾಮ್ರಾ, ಸಾಮಾಜಿಕ ಜಾಲತಾಣಗಳಲ್ಲಿ ಅರ್ನಾಬ್ ಅವರನ್ನು ಆಗಾಗ್ಗೆ ಟೀಕೆ ಮಾಡುತ್ತಿರುತ್ತಾರೆ. ವಿಮಾನ ಪ್ರಯಾಣದ ವೇಳೆಯೂ ಅವರ ರೇಗಿಸಿ ಹಲವು ವಿಮಾನಯಾನ ಸಂಸ್ಥೆಗಳಿಂದ ನಿಷೇಧ ಕೂಡಾ ಅನುಭವಿಸಿದ್ದರು.
ನ್ಯಾಯಾಂಗ ನಿಂದನೆಗಾಗಿ ಕಾಮ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಕಾನೂನು ವಿದ್ಯಾರ್ಥಿ ಶ್ರೀರಂಗ್ ಕಟ್ನೇಶ್ವರಕರ್ ಸೇರಿದಂತೆ ಇತರ ಮೂವರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ.
Advertisement