ಕೊಲ್ಕತ್ತ: ಇದೇ ತಿಂಗಳ 23 ರಿಂದ ಮುಂದಿನ ನಾಲ್ಕು ತಿಂಗಳವರೆಗೂ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್ ಮತ್ತು ಹಣ್ಣಗಳನ್ನು ಪೂರೈಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಸರ್ಕಾರ ರೂ.371 ಕೋಟಿ ರೂ. ಹಂಚಿಕೆ ಮಾಡಿದೆ.
ಪ್ರಧಾನ ಮಂತ್ರಿ ಪೋಷಣ್ ಅಭಿಯಾನದಡಿ ಮುಂದಿನ ನಾಲ್ಕು ತಿಂಗಳ ಕಾಲ ವಾರಕ್ಕೊಮ್ಮೆಯಂತೆ ಹೆಚ್ಚುವರಿ ಪೌಷ್ಠಿಕಯುಕ್ತ ಆಹಾರವಾಗಿ ಚಿಕನ್ ಮತ್ತು ಆಯಾ ಋತುವಿನ ಹಣ್ಣುಗಳನ್ನು ಪೂರೈಸಲಾಗುವುದು ಎಂದು ಅಧಿಕೃತ ನೋಟಿಫಿಕೇಷನ್ ನಲ್ಲಿ ಹೇಳಲಾಗಿದೆ.
ಹೊಸ ಯೋಜನೆಯಲ್ಲಿ ಹೆಚ್ಚುವರಿ ಪೌಷ್ಠಿಕಾಂಶಯುಕ್ತ ಆಹಾರ ಪೂರೈಕೆಗೆ ಪ್ರತಿ ವಿದ್ಯಾರ್ಥಿಗಳಿಗೆ ವಾರಕ್ಕೆ ರೂ.20 ರಷ್ಟು ವೆಚ್ಚ ಮಾಡಲಾಗುವುದು, ಈ ಪ್ರಕ್ರಿಯೆ 16 ವಾರಗಳ ಕಾಲ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ಪ್ರಸ್ತುತ ವಿದ್ಯಾರ್ಥಿಗಳಿಗೆ ಬಿಸಿಯೂಟದಲ್ಲಿ ಅನ್ನ, ಬೇಳೆ, ತರಕಾರಿ, ಸೋಯಾಬಿನ್ ಮತ್ತು ಮೊಟ್ಟೆಗಳನ್ನು ನೀಡಲಾಗುತ್ತಿದೆ. ಇದೇ ತಿಂಗಳ 23 ರಿಂದ ಏಪ್ರಿಲ್ 23ರವರೆಗೂ ವಾರದ ವಿವಿಧ ದಿನಗಳಲ್ಲಿ ಹೆಚ್ಚುವರಿ ಆಹಾರ ಪದಾರ್ಥಗಳನ್ನು ಪೂರೈಸಲಾಗುವುದು ಎಂದು ತಿಳಿಸಲಾಗಿದೆ.
Advertisement