ಬಿಜೆಪಿಯೊಂದಿಗೆ ಭ್ರಮ ನಿರಶನ: ಕಮಲ ತೊರೆಯಲು ಚಿಂತನೆ; ಕಾಂಗ್ರೆಸ್, ಟಿಎಂಸಿ, ಎಎಪಿಯತ್ತ ವರುಣ್ ಗಾಂಧಿ ಚಿತ್ತ!

ಕೆಲವು ವರ್ಷಗಳಿಂದ ಮೋದಿ ಸರ್ಕಾರದ ನೀತಿಗಳು ಹಾಗೂ ಯೋಜನೆಗಳ ವಿರುದ್ಧ ಮಾತನಾಡುತ್ತಿರುವ ಉತ್ತರಪ್ರದೇಶದ ಬಿಜೆಪಿ ಸಂಸದ ಹಾಗೂ ಗಾಂಧಿ ಕುಟುಂಬದ ಕುಡಿ ವರುಣ್‌ ಗಾಂಧಿ ಅವರು ಬಿಜೆಪಿ ತೊರೆದು ಅನ್ಯಪಕ್ಷಗಳತ್ತ ಗಮನ ಹರಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ವರುಣ್ ಗಾಂಧಿ
ವರುಣ್ ಗಾಂಧಿ

ಲಕ್ನೋ: ಕೆಲವು ವರ್ಷಗಳಿಂದ ಮೋದಿ ಸರ್ಕಾರದ ನೀತಿಗಳು ಹಾಗೂ ಯೋಜನೆಗಳ ವಿರುದ್ಧ ಮಾತನಾಡುತ್ತಿರುವ ಉತ್ತರಪ್ರದೇಶದ ಬಿಜೆಪಿ ಸಂಸದ ಹಾಗೂ ಗಾಂಧಿ ಕುಟುಂಬದ ಕುಡಿ ವರುಣ್‌ ಗಾಂಧಿ ಅವರು ಬಿಜೆಪಿ ತೊರೆದು ಅನ್ಯಪಕ್ಷಗಳತ್ತ ಗಮನ ಹರಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅವರು ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ ಅಥವಾ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಸೇರಬಹುದು ಎಂಬ ಗುಸುಗುಸು ಹರಿದಾಡುತ್ತಿದೆ.

ಬಿಜೆಪಿ ಸಂಸದ ವರುಣ್ ಗಾಂಧಿ ಅವರ ಇತ್ತೀಚಿನ ಹೇಳಿಕೆಗಳು ಮತ್ತು ಅವರ ಸ್ವಂತ ಪಕ್ಷದ ನೀತಿಗಳು ಹಾಗೂ ಆಚರಣೆಗಳ ಬಗ್ಗೆ ಬಹಿರಂಗ ಟೀಕೆಗಳು ಅವರು ಅಂತಿಮವಾಗಿ ಬಿಜೆಪಿಯಿಂದ ನಿರ್ಗಮಿಸಿ ಕಾಂಗ್ರೆಸ್‌ ಪ್ರವೇಶಕ್ಕೆ ದಾರಿ ಮಾಡಿಕೊಡುತ್ತಿದ್ದಾರೆಯೇ ಎಂದು ಹಲವರು ಆಶ್ಚರ್ಯ ಪಡುವಂತೆ ಮಾಡಿದೆ. 2 ವರ್ಷಗಳಿಂದ ಪ್ರಮುಖ ನಿಯತಕಾಲಿಕಗಳಲ್ಲಿ ಪ್ರಕಟವಾದ ಅವರ ಲೇಖನಗಳಲ್ಲಿ ಬಿಜೆಪಿಯೊಂದಿಗಿನ ಅವರ ಭ್ರಮನಿರಸನವು ಗೋಚರಿಸುತ್ತಿದ್ದು, ಕಳೆದ ತಿಂಗಳು ಸಾರ್ವಜನಿಕ ಸಭೆಯೊಂದರಲ್ಲಿ ಅವರು ಹೇಳಿದ್ದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.

ವಾಸ್ತವವಾಗಿ, ವರುಣ್ ಗಾಂಧಿ ಅವರು ತಮ್ಮ ಸೋದರಸಂಬಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಮಾತನಾಡುತ್ತಾರೆ ಎಂದು ಮೂಲಗಳು ಹೇಳುತ್ತವೆ. ಮೊದಲು ಈ ಸಂಭಾಷಣೆ ಕುಟುಂಬದಲ್ಲಿ ನಡೆಯುತ್ತಿತ್ತು ಎನ್ನಲಾಗಿದ್ದರೂ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.

2024ರ ಲೋಕಸಭೆ ಚುನಾವಣೆಗೂ ಮುನ್ನ ವರುಣ್ ಗಾಂಧಿ ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ ಎಂದು ರಾಜಕೀಯ ಪಂಡಿತರು ಹೇಳಿಕೊಂಡಿದ್ದಾರೆ. ಇದಕ್ಕಾಗಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ವರುಣ್ ಗಾಂಧಿ ಕಾಂಗ್ರೆಸ್ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ, ವರುಣ್ ಗಾಂಧಿ ಪಕ್ಷಕ್ಕೆ ಸೇರುತ್ತಾರೋ ಇಲ್ಲವೋ ಎಂದು ಖರ್ಗೆ ಜೀ ಅವರನ್ನು ಕೇಳಿ, ಭಾರತ್ ಜೋಡೋ ಯಾತ್ರೆಯಲ್ಲಿ ಅವರು ಸೇರಿದಂತೆ ಎಲ್ಲರಿಗೂ ಸ್ವಾಗತ ಆದರೆ ವರುಣ್ ಬಿಜೆಪಿಯಲ್ಲಿರುವುದರಿಂದ ಅಲ್ಲಿ ಅವರಿಗೆ ಹಲವಾರು ಸಮಸ್ಯೆಗಳಿವೆ ಎಂದು ಹೇಳಿದ್ದಾರೆ.

ಈ ನಡುವೆ ಅವರು ಕಾಂಗ್ರೆಸ್‌ ಸೇರುವ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಸೋದರಿ ಪ್ರಿಯಾಂಕಾ ಗಾಂಧಿ ಜತೆ ವರುಣ್‌ ಗಾಂಧಿಗೆ ಉತ್ತಮ ಸಂಬಂಧವಿದೆ. ಆದರೆ ರಾಹುಲ್‌-ಸೋನಿಯಾ ಗಾಂಧಿ ಜತೆ ಅಷ್ಟು ಸಂಬಂಧ ಚೆನ್ನಾಗಿಲ್ಲ. ಹೀಗಾಗಿ ವರುಣ್‌ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ರಾಹುಲ್‌ ಗಾಂಧಿ ಒಪ್ಪಬೇಕು ಎನ್ನಲಾಗಿದೆ. ಇದಲ್ಲದೆ, ಅವರು ತೃಣಮೂಲ ಕಾಂಗ್ರೆಸ್‌ ಹಾಗೂ ಅರವಿಂದ ಕೇಜ್ರಿವಾಲ್‌ರ ಆಪ್‌ ಸೇರುವ ಬಗ್ಗೆಯೂ ಉತ್ಸುಕರಾಗಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಮತ್ತೊಂದೆಡೆ, ಈ ಹಿಂದೆಯೇ ವರುಣ್ ಗಾಂಧಿ ಈ ಬಗ್ಗೆ ಸೂಚನೆ ನೀಡಿದ್ದರು, “ಈ ದೇಶವನ್ನು ಒಗ್ಗೂಡಿಸಲು ರಾಜಕೀಯ ಬೇಕು, ಆದರೆ ಅದನ್ನು ಒಡೆಯಲು ಅಲ್ಲ, ಜಾತಿ ಧರ್ಮದ ಹೆಸರಿನಲ್ಲಿ ಮತಗಳಿಸುತ್ತಿರುವ ಜನಪ್ರತಿನಿಧಿಗಳು ಜನರ ಉದ್ಯೋಗ, ಶಿಕ್ಷಣ, ಆರೋಗ್ಯದಂತಹ ಗಂಭೀರ ವಿಷಯಗಳ ಬಗ್ಗೆ ಏನು ಮಾಡುತ್ತಿದ್ದಾರೆ ಎಂಬುದು ತಿಳಿದುಕೊಳ್ಳಬೇಕಾಗಿದೆ, ಜನರನ್ನು ತುಳಿಯುವ ಬದಲು ಅವರನ್ನು ಮೇಲಕ್ಕೆತ್ತುವ ಕೆಲಸ ಆಗಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ.

2024ರ ಲೋಕಸಭೆ ಚುನಾವಣೆಗೂ ಮುನ್ನ ವರುಣ್ ಗಾಂಧಿ ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ ಎಂದು ರಾಜಕೀಯ ಪಂಡಿತರು ಹೇಳಿಕೊಂಡಿದ್ದಾರೆ. ಇದಕ್ಕಾಗಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com