ಜೋಶಿಮಠ ಕುಸಿತದ ಬಗ್ಗೆ 2001ರಲ್ಲಿಯೇ ಸರ್ಕಾರಕ್ಕೆ ಎಚ್ಚರಿಕೆ ವರದಿ ಸಲ್ಲಿಸಲಾಗಿದೆ: ಪರಿಸರವಾದಿ

ಭೌಗೋಳಿಕ ಅಂಶಗಳ ಹೊರತಾಗಿ, ಜೋಶಿಮಠ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಸಂಭವನೀಯ ಅಪಾಯಗಳ ಬಗ್ಗೆ ತಜ್ಞರ ಎಚ್ಚರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವುದೇ ಈ ಭೂ ಕುಸಿತಕ್ಕೆ ಪ್ರಮುಖ ಕಾರಣ ಎಂದು...
ಉತ್ತರಾಖಂಡದ ಜೋಶಿಮಠದಲ್ಲಿ ಬಿರುಕು ಬಿಟ್ಟ ಭೂಮಿ
ಉತ್ತರಾಖಂಡದ ಜೋಶಿಮಠದಲ್ಲಿ ಬಿರುಕು ಬಿಟ್ಟ ಭೂಮಿ

ಗೋಪೇಶ್ವರ: ಭೌಗೋಳಿಕ ಅಂಶಗಳ ಹೊರತಾಗಿ, ಜೋಶಿಮಠ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಸಂಭವನೀಯ ಅಪಾಯಗಳ ಬಗ್ಗೆ ತಜ್ಞರ ಎಚ್ಚರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವುದೇ ಈ ಭೂ ಕುಸಿತಕ್ಕೆ ಪ್ರಮುಖ ಕಾರಣ ಎಂದು ಪರಿಸರವಾದಿ ಚಂಡಿ ಪ್ರಸಾದ್ ಭಟ್ ಅವರು ಸೋಮವಾರ ಹೇಳಿದ್ದಾರೆ.

ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಹಿಮಾಲಯದ ವಿವರವಾದ ವಲಯ ಮ್ಯಾಪಿಂಗ್, ಜೋಶಿಮಠದಲ್ಲಿ ಅಡಗಿರುವ ಅಪಾಯಗಳ ಎಚ್ಚರಿಕೆಯನ್ನು ಎರಡು ದಶಕಗಳ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿ(ಎನ್‌ಆರ್‌ಎಸ್‌ಎ) ಸೇರಿದಂತೆ ದೇಶದ ಸುಮಾರು ಹನ್ನೆರಡು ಪ್ರಮುಖ ವೈಜ್ಞಾನಿಕ ಸಂಸ್ಥೆಗಳಿಂದ ರಿಮೋಟ್ ಸೆನ್ಸಿಂಗ್ ಮತ್ತು ಜಿಯೋಗ್ರಾಫಿಕ್ ಇನ್ಫರ್ಮೇಷನ್ ಸಿಸ್ಟಮ್ (ಜಿಐಎಸ್) ಬಳಸಿ ಅಧ್ಯಯನ ನಡೆಸಲಾಗಿದೆ ಮತ್ತು ಈ ಅಧ್ಯಯನದ ವರದಿಯನ್ನು 2001ರಲ್ಲೇ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿತ್ತು ಎಂದು ಚಿಪ್ಕೋ ಚಳುವಳಿಯೊಂದಿಗೆ ಗುರಿತಿಸಿಕೊಂಡಿರುವ ಭಟ್ ಅವರು ಹೇಳಿದ್ದಾರೆ.

ಜೋಶಿಮಠ ಸೇರಿದಂತೆ ಸಂಪೂರ್ಣ ಚಾರ್ ಧಾಮ್ ಮತ್ತು ಮಾನಸ ಸರೋವರ ಯಾತ್ರೆ ಮಾರ್ಗಗಳನ್ನು ಒಳಗೊಂಡ ವಲಯ ಮ್ಯಾಪಿಂಗ್ ಅನ್ನು ಆ ಸಮಯದಲ್ಲಿ ಡೆಹ್ರಾಡೂನ್, ತೆಹ್ರಿ, ಉತ್ತರಕಾಶಿ, ಪೌರಿ, ರುದ್ರಪ್ರಯಾಗ, ಪಿಥೋರಗಢ, ನೈನಿತಾಲ್ ಮತ್ತು ಚಮೋಲಿ ಜಿಲ್ಲಾಡಳಿತಗಳಿಗೆ ಸಲ್ಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈ ವಲಯ ಮ್ಯಾಪಿಂಗ್ ವರದಿಯಲ್ಲಿ ಜೋಶಿಮಠದ 124.54 ಚದರ ಕಿ.ಮೀ ಪ್ರದೇಶದಲ್ಲಿ ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆಗೆ ಅನುಗುಣವಾಗಿ ಆರು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಭಟ್ ಹೇಳಿದ್ದಾರೆ.

ಮ್ಯಾಪ್ ಮಾಡಲಾದ ಶೇಕಡಾ 99 ರಷ್ಟು ಪ್ರದೇಶವನ್ನು ವಿವಿಧ ಹಂತಗಳಲ್ಲಿ ಭೂಕುಸಿತ ಪೀಡಿತ ಎಂದು ತೋರಿಸಲಾಗಿದೆ. ಶೇ. 39 ರಷ್ಟು ಪ್ರದೇಶವನ್ನು ಹೆಚ್ಚಿನ ಅಪಾಯದ ವಲಯವೆಂದು ಗುರುತಿಸಲಾಗಿದೆ.  ಶೇಕಡಾ 28 ರಷ್ಟು ಪ್ರದೇಶವನ್ನು ಮಧ್ಯಮ ಅಪಾಯದ ವಲಯ ಮತ್ತು ಶೇ. 29 ರಷ್ಟು ಪ್ರದೇಶವನ್ನು ಕಡಿಮೆ-ಅಪಾಯದ ವಲಯ ಎಂದು ಗುರುತಿಸಲಾಗಿದೆ ಎಂದು ಭಟ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com