ರಜೌರಿ ಉಗ್ರರ ದಾಳಿ ಕುರಿತು ಎನ್ ಐಎ ತನಿಖೆ: ಅಮಿತ್ ಶಾ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿ ಕುರಿತ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅಮಿತ್ ಶಾ, ಕಳೆದ ಒಂದೂವರೆ ವರ್ಷಗಳಲ್ಲಿ ಜಮ್ಮುವಿನಲ್ಲಿ ನಡೆದ ಎಲ್ಲಾ ಭಯೋತ್ಪಾದಕ ಘಟನೆಗಳನ್ನು ಸಹ ಎನ್‌ಐಎ ತನಿಖೆ ನಡೆಸಲಿದೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನಿಖೆಯಲ್ಲಿ ಸಕ್ರಿಯವಾಗಿ ಸಹಾಯ ಮಾಡಲಿದ್ದಾರೆ ಎಂದರು. ಜನವರಿ 1 ಮತ್ತು 2 ರಂದು ರಜೌರಿಯಲ್ಲಿ ನಡೆದ ಅವಳಿ ಭಯೋತ್ಪಾದಕ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದರೆ 14 ಜನರು ಗಾಯಗೊಂಡಿದ್ದರು.
ಜಮ್ಮು ಮತ್ತು ಕಾಶ್ಮೀರದ ಭದ್ರತಾ ಏಜೆನ್ಸಿಗಳು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಭದ್ರತಾ ಪರಿಶೀಲನಾ ಸಭೆ ನಡೆಸಿದ ಶಾ, ಭದ್ರತೆಯನ್ನು ಇನ್ನಷ್ಟು ಬಲಪಡಿಸುವುದು ಹೇಗೆ ಎಂದು ನಾವು ಚರ್ಚಿಸಿದ್ದೇವೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಮತ್ತು ಭವಿಷ್ಯದಲ್ಲಿ ಅಂತಹ ಘಟನೆ ತಡೆಯಲು ಸಜ್ಜಾಗಿರುವುದಾಗಿ ಭದ್ರತಾ ಏಜೆನ್ಸಿಗಳು ತಿಳಿಸಿವೆ ಎಂದರು.
ಮೂರು ತಿಂಗಳೊಳಗೆ ಜಮ್ಮು ವಿಭಾಗದ ಎಲ್ಲಾ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸುವ ಉದ್ದೇಶದಿಂದ ಕಾಲಮಿತಿಯ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದ ಕೇಂದ್ರ ಸಚಿವರು, ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಉಗ್ರರನ್ನು ಹಿಮ್ಮೆಟ್ಟಿಸಲು ಸಿದ್ಧರಿರುವುದಾಗಿ ಅವರು ತಿಳಿಸಿರುವುದಾಗಿ ಅಮಿತ್ ಶಾ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ