
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಾರಣಾಸಿಯಲ್ಲಿ ಟೆಂಟ್ ಸಿಟಿಯನ್ನು ಉದ್ಘಾಟಿಸಿದರು ಮತ್ತು 1,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹಲವಾರು ಒಳನಾಡು ಜಲಮಾರ್ಗ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಪವಿತ್ರ ನಗರದ ಪ್ರಸಿದ್ಧ ಘಾಟ್‌ಗಳ ಎದುರು ಗಂಗಾನದಿಯ ದಡದಲ್ಲಿ ಅಭಿವೃದ್ಧಿಪಡಿಸಲಾದ ಈ ಟೆಂಟ್ ಸಿಟಿಯು ಈ ಪ್ರದೇಶದ ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ನೀಡಲಿದೆ.
ವಾರಣಾಸಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ ಟೆಂಟ್ ಸಿಟಿ ಪ್ರವಾಸಿಗರಿಗೆ ಲೈವ್ ಶಾಸ್ತ್ರೀಯ ಸಂಗೀತ ಮತ್ತು ಯೋಗ ತರಬೇತಿಯ ಜೊತೆಗೆ ವಸತಿ ಸೌಕರ್ಯಗಳನ್ನು ಒದಗಿಸುತ್ತದೆ.
ಪ್ರವಾಸಿಗರು ವಾರಣಾಸಿಯ ವಿವಿಧ ಘಾಟ್‌ಗಳಿಂದ ದೋಣಿಗಳ ಮೂಲಕ ಈ ಟೆಂಟ್ ಸಿಟಿಯನ್ನು ತಲುಪಬಹುದು. ಇದು ಅಕ್ಟೋಬರ್‌ನಿಂದ ಜೂನ್‌ವರೆಗೆ ಕಾರ್ಯನಿರ್ವಹಿಸಲಿದ್ದು, ಮಳೆಗಾಲದಲ್ಲಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗುವುದರಿಂದ ಮೂರು ತಿಂಗಳ ಕಾಲ ಟೆಂಟ್ ಸಿಟಿ ಬಂದ್ ಮಾಡಲಾಗುತ್ತದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಬಂದರು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
Advertisement