ಬದ್ರಿನಾಥ ಧಾಮ್ ಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಲ್ಲಿನ ಬಿರುಕು ಮತ್ತಷ್ಟು ಅಗಲ

ಉತ್ತರಾಖಂಡ್ ನ ಜೋಶಿಮಠ ಕುಸಿತದ ಭೀತಿ ಎದುರಿಸುತ್ತಿರುವ ಬೆನ್ನಲ್ಲೇ ಬದ್ರಿನಾಥ ಧಾಮ್ ಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಲ್ಲಿನ ಬಿರುಕು ಮತ್ತಷ್ಟು ಅಗಲಗೊಂಡಿರುವುದು ಆತಂಕವನ್ನು ಹೆಚ್ಚಿಸಿದೆ. 
ಬದ್ರಿನಾಥಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ರಸ್ತೆ ಬಿರುಕು ಬಿಟ್ಟಿರುವ ದೃಶ್ಯ
ಬದ್ರಿನಾಥಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ರಸ್ತೆ ಬಿರುಕು ಬಿಟ್ಟಿರುವ ದೃಶ್ಯ

ಡೆಹ್ರಾಡೂನ್: ಉತ್ತರಾಖಂಡ್ ನ ಜೋಶಿಮಠ ಕುಸಿತದ ಭೀತಿ ಎದುರಿಸುತ್ತಿರುವ ಬೆನ್ನಲ್ಲೇ ಬದ್ರಿನಾಥ ಧಾಮ್ ಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಲ್ಲಿನ ಬಿರುಕು ಮತ್ತಷ್ಟು ಅಗಲಗೊಂಡಿರುವುದು ಆತಂಕವನ್ನು ಹೆಚ್ಚಿಸಿದೆ. 

ಬದ್ರಿನಾಥಕ್ಕೆ ರಸ್ತೆ ಮಾರ್ಗ ಕಲ್ಪಿಸುವ ರಸ್ತೆಯಲ್ಲಿ ಒಂದು ಅಥವಾ ಎರಡು ಮೀಟರ್ ನಷ್ಟು ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ದುರಸ್ತಿಯನ್ನು ಸರ್ಕಾರ ಆದ್ಯತೆಯ ವಿಷಯವಾಗಿ ಪರಿಗಣಿಸಿದೆ. ಬದ್ರಿನಾಥ ಧಾಮ್ ಪ್ರಾರಂಭವಾಗುವುದಕ್ಕೂ ಮುನ್ನ ರಸ್ತೆಯನ್ನು ದುರಸ್ತಿಗೊಳಿಸುವುದು ಸರ್ಕಾರಕ್ಕೆ ಅತ್ಯಂತ ದೊಡ್ಡ ಸವಾಲಾಗಿ ಪರಿಣಮಿಸಿದೆ.
 
ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ಡಾ. ರಂಜಿತ್ ಸಿನ್ಹಾ ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ್ದು, "ಸ್ಥಳೀಯ ಆಡಳಿತ ಜೋಶಿಮಠದಲ್ಲಿನ ಬದ್ರಿನಾಥ ರಾಷ್ಟೀಯ ಹೆದ್ದಾರಿಯಲ್ಲಿನ ಕುಸಿತದ ಬಗ್ಗೆ ಅತ್ಯಂತ ಸೂಕ್ಷ್ಮವಾಗಿ ನಿಗಾ ವಹಿಸಿದೆ. ಎಲ್ಲಾ ಸಂಸ್ಥೆಗಳಿಗೂ ಈ ಮಾರ್ಗದಲ್ಲಿನ ದುರಸ್ತಿ ಕಾಮಗಾರಿಗೆ ಕೈ ಜೋಡಿಸುವಂತೆ ಸೂಚಿಸಲಾಗಿದೆ ಬದ್ರಿನಾಥ ಯಾತ್ರೆ ಆರಂಭಕ್ಕೂ ಮುನ್ನ ಆ ಮಾರ್ಗದ ರಸ್ತೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಲಾಗುವುದು" ಎಂದು ತಿಳಿಸಿದ್ದಾರೆ.  

ಬದ್ರಿ ಕೇದಾರ್ ದೇವಾಲಯ ಸಮಿತಿ ಅಧ್ಯಕ್ಷ ಅಜಯೇಂದ್ರ ಅಜಯ್, ಜೋಶಿಮಠದಲ್ಲಿನ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳ ಸಮನ್ವಯಕ್ಕೆ ಸಿಎಂ ಪ್ರತಿನಿಧಿಯಾಗಿ ಹೆಚ್ಚುವರಿ ಅಧಿಕಾರ ವಹಿಸಿಕೊಂಡಿದ್ದು, ರಸ್ತೆ ಕುಸಿತದಿಂದ ಸಮಸ್ಯೆಗೊಳಗಾದವರಿಗೆ ಎಲ್ಲಾ ರೀತಿಯ ಪರಿಹಾರವನ್ನೂ ನೀಡುವುದಕ್ಕೆ ಸೂಚಿಸಿದ್ದಾರೆ.

ಇದೇ ರೀತಿಯಲ್ಲಿ ಬಿರುಕುಗಳು ಅಗಲವಾಗುವುದು ಮುಂದುವರೆದರೆ, ಹೆದ್ದಾರಿಯ ಹೆಚ್ಚಿನ ಭಾಗವನ್ನು ನೆಲಸಮಗೊಳಿಸಿ ನಂತರ ದುರಸ್ತಿ ಮಾಡಬೇಕಾಗುತ್ತದೆ ಅಂಥಹ ಪರಿಸ್ಥಿತಿ ನಿರ್ಮಾಣವಾದಲ್ಲಿ ಬದ್ರಿನಾಥ ಧಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ನಿರ್ಬಂಧಿಸಬೇಕಾಗುತ್ತದೆ ಅಷ್ಟೇ ಅಲ್ಲದೇ ಭಾರತೀಯ ಸೇನೆಗೆ ಚೀನಾದೊಂದಿಗಿನ ಗಡಿ ಸಂಪರ್ಕವೇ ಕಡಿತಗೊಳ್ಳುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆದ್ದಾರಿಯಲ್ಲಿನ ಬಿರುಕುಗಳ ಮಾದರಿಯು ಸಮಾನಾಂತರವಾಗಿದ್ದು, ಇದರ ಹೊರತಾಗಿ ಬೃಹತ್ ಬಂಡೆಗಳು ರಸ್ತೆಯ ಪಕ್ಕದಲ್ಲಿ ಬೀಳುತ್ತಿರುವುದೂ ಆತಂಕಕ್ಕೆ ಕಾರಣವಾಗಿದೆ ಎಂದು ಭೂವಿಜ್ಞಾನಿ ಪ್ರೊ ಎಂಪಿಎಸ್ ಬಿಷ್ಟ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com