ಪ್ರಕಾಶ್ ಅಂಬೇಡ್ಕರರ ವಂಚಿತ್ ಬಹುಜನ ಅಘಾಡಿ ಜತೆ ಮೈತ್ರಿ ಘೋಷಿಸಿದ ಉದ್ಧವ್ ಶಿವಸೇನೆ

ಶಿವಸೇನಾ ಸಂಸ್ಥಾಪಕ ದಿವಂಗತ ಬಾಳ್ ಠಾಕ್ರೆ ಅವರ ಜನ್ಮದಿನದಂದೆ ಶಿವಸೇನೆ(ಯುಬಿಟಿ) ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ ಸೋಮವಾರ ಮೈತ್ರಿ ಘೋಷಿಸಿವೆ.
ಪ್ರಕಾಶ್ ಅಂಬೇಡ್ಕರ್ - ಉದ್ಧವ್ ಠಾಕ್ರೆ
ಪ್ರಕಾಶ್ ಅಂಬೇಡ್ಕರ್ - ಉದ್ಧವ್ ಠಾಕ್ರೆ

ಮುಂಬೈ: ಶಿವಸೇನಾ ಸಂಸ್ಥಾಪಕ ದಿವಂಗತ ಬಾಳ್ ಠಾಕ್ರೆ ಅವರ ಜನ್ಮದಿನದಂದೆ ಶಿವಸೇನೆ(ಯುಬಿಟಿ) ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ ಸೋಮವಾರ ಮೈತ್ರಿ ಘೋಷಿಸಿವೆ.

ಇಂದು ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ ಅವರು, ತಮ್ಮ ತಾತ ಕೇಶವ್ ಠಾಕ್ರೆ ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ಅಜ್ಜ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ಸಮಕಾಲೀನರು. ಈ ಇಬ್ಬರು ಪರಸ್ಪರ ಮೆಚ್ಚಿಕೊಂಡಿದ್ದರು ಮತ್ತು ಸಾಮಾಜಿಕ ಅನಿಷ್ಟಗಳು ಹಾಗೂ ಕೆಟ್ಟ ಆಚರಣೆಗಳನ್ನು ತೊಡೆದುಹಾಕಲು ಶ್ರಮಿಸಿದರು ಎಂದರು.

"ಈಗ ರಾಜಕೀಯದಲ್ಲಿ ಕೆಲವು ಕೆಟ್ಟ ಆಚರಣೆಗಳಿದ್ದು, ಅವುಗಳನ್ನು ನಿರ್ಮೂಲನೆ ಮಾಡಲು, ಆ ಇಬ್ಬರು ನಾಯಕರ ವಾರಸುದಾರರು ಮತ್ತು ಅವರ ಸುತ್ತಲಿನ ಜನ ದೇಶದ ಹಿತಾಸಕ್ತಿ ಕಾಪಾಡಲು ಒಗ್ಗೂಡಿದ್ದಾರೆ. ಪ್ರಜಾಪ್ರಭುತ್ವ ಜೀವಂತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಒಗ್ಗೂಡುತ್ತಿದ್ದೇವೆ" ಎಂದು ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ ಹೆಸರನ್ನು ನೇರವಾಗಿ ಹೇಳದೆ, ದೇಶ ನಿರಂಕುಶಾಧಿಕಾರದತ್ತ ಸಾಗುತ್ತಿದೆ ಎಂದು ಠಾಕ್ರೆ ವಾಗ್ದಾಳಿ ನಡೆಸಿದರು.

ಮುಂಬೈ ಮತ್ತು ಥಾಣೆ ಸೇರಿದಂತೆ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ವಂಚಿತ್ ಬಹುಜನ ಅಘಾಡಿ ಮತ್ತು ಉದ್ಧವ್ ಶಿವಸೇನೆ ಮೈತ್ರಿ ಮಾಡಿಕೊಂಡಿದ್ದು, ಈ ಕುರಿತು ಮಾತನಾಡಿದ ಪ್ರಕಾಶ್ ಅಂಬೇಡ್ಕರ್ ಅವರು, ವಿಬಿಎ ಮತ್ತು ಶಿವಸೇನೆ (ಯುಬಿಟಿ) ಮೈತ್ರಿಯಿಂದ ರಾಜಕೀಯ ಬದಲಾವಣೆಯ ಪರ್ವ ಆರಂಭವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com