ನವದೆಹಲಿ: 2023ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ.
ಮಾಜಿ ವಿದೇಶಾಂಗ ಸಚಿವ, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ, ಮಹಾರಾಷ್ಟ್ರದ ಕಲಾವಿದ ಜಾಕೀರ್ ಹುಸೇನ್, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (ಮರಣೋತ್ತರ) ಸೇರಿ 6 ಸಾಧಕರಿಗೆ ಪದ್ಮವಿಭೂಷಣ ಹಾಗೂ ಸಾಹಿತಿ ಎಸ್ಎಲ್ ಭೈರಪ್ಪ, ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ, ಗಾಯಕಿ ವಾಣಿ ಜಯರಾಂ, ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾಮೂರ್ತಿ ಸೇರಿದಂತೆ 9 ಮಂದಿಗೆ ಪದ್ಮಭೂಷಣ ಸಿಕ್ಕಿದೆ.
ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ, ಬಾಲಿವುಡ್ ನಟಿ ರವೀನಾ ಟಂಡನ್ ಸೇರಿದಂತೆ 91 ಸಾಧಕರಿಗೆ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ. ಈ ಪೈಕಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.
ಕೊಡಗಿನ ಉಮ್ಮತ್ತಾಟ್ ಜಾನಪದ ನೃತ್ಯ ಕಲೆ ಕಲಾವಿದೆ ರಾಣಿ ಮಾಚಯ್ಯ, ಖಾದರ್ ವಲ್ಲಿ ದೂದೇಕುಲ ( ವಿಜ್ಞಾನ ಮತ್ತು ಇಂಜಿನಿಯರಿಂಗ್ ) ನಾಡೋಜ ಪಿಂಡಿ ಪಾಪನಹಳ್ಳಿ ಮುನಿವೆಂಕಟಪ್ಪ (ಕಲೆ) ಷಾ ರಶೀದ್ ಅಹ್ಮದ್ ಖಾದ್ರಿ (ಕಲೆ) ಶ್ರೀ ಸುಬ್ಬರಾಮನ್ (ಪುರಾತತ್ವ ಶಾಸ್ತ್ರ) ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಈ ಮೂಲಕ ಕರ್ನಾಟಕದ ಒಟ್ಟು 8 ಸಾಧಕರು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಓಆರ್ ಎಸ್ ಸಂಶೋಧಕ ದಿಲೀಪ್ ಮಹಲನಾಬಿಸ್ (ಮರಣೋತ್ತರ) ಪದ್ಮ ವಿಭೂಷಣ, ಜನುಮ್ ಸಿಂಗ್ ಸೋಯ್, ಧನಿರಾಮ್ ಟೊಟೊ, ನೆಕ್ರಮ್ ಶರ್ಮಾ, ಬಿ ರಾಮಕೃಷ್ಣ ರೆಡ್ಡಿ, ರತನ್ ಚಂದ್ರಕರ್ , ಹಿರಾ ಬಾಯಿ ಲುಬಿ, ಚಂದರ್ ದಾವರ್, ಚಂದ್ರಶೇಖರ್ ಅವರಿಗೆ ಪದ್ಮಶ್ರೀ ಲಭಿಸಿದೆ. ಈ ಮೂಲಕ ಒಟ್ಟು 106 ಸಾಧಕರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.
Advertisement