ಅಹ್ಮದಾಬಾದ್: ಸ್ವ ಘೋಷಿತ ದೇವಮಾನವ ಅಸಾರಾಮ್ ಬಾಪು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಗುಜರಾತ್ ನ ಗಾಂಧಿನಗರ ಕೋರ್ಟ್ ಜ.30 ರಂದು ತೀರ್ಪು ಪ್ರಕಟಿಸಿದೆ. 2013 ರಲ್ಲಿ ಮಹಿಳೆ ಭಕ್ತೆಯೊಬ್ಬರು ಅಸಾರಾಮ್ ಬಾಪು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.
ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಷ ಡಿ.ಕೆ ಸೋನಿ ಶಿಕ್ಷೆಯ ಪ್ರಮಾಣವನ್ನು ಜ.31 ಕ್ಕೆ ಕಾಯ್ದಿರಿಸಿದೆ. ಅಸಾರಾಮ್ ಅವರ ಪತ್ನಿ ಸೇರಿದಂತೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇನ್ನೂ 6 ಮಂದಿಯನ್ನು ಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿದೆ.
ಅಹ್ಮದಾಬಾದ್ ನ ಚಾಂದ್ ಖೇಡ ಪೊಲೀಸ್ ಠಾಣೆಯ ಅಧಿಕಾರಿಗಳು ದಾಖಲಿಸಿದ್ದ ಎಫ್ಐಆರ್ ಪ್ರಕಾರ, ಅಸಾರಾಮ್ ಬಾಪು, ನಗರದ ಹೊರವಲಯದಲ್ಲಿರುವ ತನ್ನ ಆಶ್ರಮದಲ್ಲಿ ಮಹಿಳೆಯ ಮೇಲೆ 2001 ರಿಂದ 2006 ವರೆಗೆ ಹಲವು ಬಾರಿ ಅತ್ಯಾಚಾರವೆಸಗಿದ್ದ.
ಕೋರ್ಟ್ ಅಸಾರಾಮ್ ಬಾಪು ನ್ನು ಐಪಿಸಿ ಸೆಕ್ಷನ್ 376 2 (ಸಿ) (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧಗಳು) ಹಾಗೂ ಇತರ ಸೆಕ್ಷನ್ ಗಳ ಅಡಿಯಲ್ಲಿ ಆತನನ್ನು ದೋಷಿ ಎಂದು ತೀರ್ಪು ನೀಡಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಆರ್ ಸಿ ಕೊಡೇಕರ್ ಹೇಳಿದ್ದಾರೆ.
ವಿವಾದಿತ ದೇವಮಾನವನ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಅಪರಾಧ ಸಾಬೀತಾಗಿದ್ದು, ಈಗಾಗಲೇ ಜೋಧ್ ಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದಾರೆ.
Advertisement