ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆ ಮತ್ತು ಅದರ ಫಲಿತಾಂಶಗಳು ನಮ್ಮ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಕೋಲ್ಕತ್ತಾ ಹೈಕೋರ್ಟ್ ಬುಧವಾರ ಹೇಳಿದೆ.
ಮತದಾನದ ದಿನದಂದು ಚುನಾವಣಾ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಮೂರು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಈ ಸಂಬಂಧ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
"ಈ ವಿಷಯವು ನ್ಯಾಯಾಲಯದಲ್ಲಿರುವುದರಿಂದ, ಇಲ್ಲಿಯವರೆಗೆ ಏನೇ ಮಾಡಿದ್ದರೂ, ಅಂದರೆ, ಚುನಾವಣೆ ಪ್ರಕ್ರಿಯೆಗಳು ಮತ್ತು ಫಲಿತಾಂಶಗಳು ಈ ರಿಟ್ ಅರ್ಜಿಗೆ ಸಂಬಂಧಿಸಿದ ಅಂತಿಮ ಆದೇಶಗಳಿಗೆ ಒಳಪಟ್ಟಿರುತ್ತದೆ" ಹೈಕೋರ್ಟ್ ಹೇಳಿದೆ.
ಪಂಚಾಯತ್ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ ಎಂದು ಘೋಷಿಸಲಾದ ಎಲ್ಲಾ ಅಭ್ಯರ್ಥಿಗಳಿಗೆ ರಾಜ್ಯ ಚುನಾವಣಾ ಆಯೋಗ ಈ ವಿಚಾರವನ್ನು ತಿಳಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಜುಲೈ 8 ರಂದು ನಡೆದ ಪಂಚಾಯತ್ ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ಮತ್ತು ಚುನಾವಣಾ ಅಕ್ರಮಗಳು ನಡೆದಿವೆ ಎಂದು ಅರ್ಜಿದಾರರು ಆರೋಪಿಸಿದ್ದು, ಸುಮಾರು 50,000 ಬೂತ್‌ಗಳಲ್ಲಿ ಮರು ಮತದಾನ ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ಒಟ್ಟು 696 ಬೂತ್‌ಗಳಲ್ಲಿ ಮರು ಮತದಾನ ನಡೆದಿದ್ದು, ಜುಲೈ 11ರಂದು ಮತ ಎಣಿಕೆ ಕಾರ್ಯ ಆರಂಭವಾಗಿದೆ.
Advertisement