ಸಾಂದರ್ಭಿಕ ಚಿತ್ರ
ದೇಶ
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು, ನಾಲ್ಕು ತಿಂಗಳಲ್ಲಿ ಎಂಟನೇ ಬಲಿ
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತರಲಾಗಿದ್ದ ಮತ್ತೊಂದು ಚೀತಾ ಶುಕ್ರವಾರ ಮೃತಪಟ್ಟಿದ್ದು, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಎಂಟು ಚೀತಾಗಳು ಸಾವನ್ನಪ್ಪಿವೆ.
ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತರಲಾಗಿದ್ದ ಮತ್ತೊಂದು ಚೀತಾ ಶುಕ್ರವಾರ ಮೃತಪಟ್ಟಿದ್ದು, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಎಂಟು ಚೀತಾಗಳು ಸಾವನ್ನಪ್ಪಿವೆ.
ನಮೀಬಿಯಾದಿಂದ ಸ್ಥಳಾಂತರಗೊಂಡಿದ್ದ ಮಧ್ಯ ವಯಸ್ಕ ಚೀತಾ ಸೂರಜ್‌ನ ಮೃತದೇಹವನ್ನು ಇಂದು ಬೆಳಗಿನ ಜಾವ ಗಸ್ತು ತಂಡ ಪತ್ತೆ ಮಾಡಿದೆ.
ಸೆಪ್ಟೆಂಬರ್ 17, 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾ ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ ನಂತರ ಮೃತಪಟ್ಟ ಎಂಟನೇ ಚೀತಾ ಇದಾಗಿದೆ. ಸೂರಜ್ ಸಾವಿಗೆ ನಿಖರವಾದ ಕಾರಣ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮಂಗಳವಾರ, ತೇಜಸ್ ಎಂಬ ವಯಸ್ಕ ದಕ್ಷಿಣ ಆಫ್ರಿಕಾದ ಚೀತಾ ಶವ ಆವರಣವೊಂದರಲ್ಲಿ ಪತ್ತೆಯಾಗಿತ್ತು. ಅಲ್ಲಿ ಅದನ್ನು ಸಂಯೋಗಕ್ಕಾಗಿ ನಮೀಬಿಯಾದ ಹೆಣ್ಣು ಚೀತಾ ಜೊತೆ ಇರಿಸಲಾಗಿತ್ತು.

