
ನವದೆಹಲಿ: ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಯಮುನಾ ನದಿ ಅಪಾಯದ ಹಂತ ಮೀರಿ ಹರಿಯುತ್ತಿದೆ. ಗ್ರೇಟರ್ ನೋಯ್ಡಾದ ಯಮುನಾ ನದಿ ದಡಕ್ಕೆ ಭಾನುವಾರ ಸ್ನಾನಕ್ಕೆ ತೆರಳಿದ್ದ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರಿಬ್ಬರನ್ನು ಡಂಕೌರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಕನ್‌ಪುರ ಖಾದರ್ ಗ್ರಾಮದ ಧೀರಾಜ್ (21) ಮತ್ತು ಸಂಜಿತ್ (17) ಎಂದು ಗುರುತಿಸಲಾಗಿದೆ. "ಧೀರಜ್ ಮತ್ತು ಸಂಜಿತ್ ಇಂದು ಬೆಳಗ್ಗೆ ಯಮುನಾ ನದಿ ಬಳಿಯಿರುವ ಪ್ರವಾಹ ಪ್ರದೇಶದಲ್ಲಿ ಸ್ನಾನಕ್ಕೆ ತೆರಳಿದ್ದರು. ಅವರ ಫೋನ್ ಮತ್ತು ಬಟ್ಟೆಗಳನ್ನು ನದಿ ತೀರದಲ್ಲಿ ಇಡಲಾಗಿತ್ತು. ಆದರೆ ಇಬ್ಬರೂ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಮಾಹಿತಿ ಪಡೆದ ನಂತರ ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಸ್ಥಳೀಯ ಪೊಲೀಸರ ತಂಡವನ್ನು ಹುಡುಕಾಟಕ್ಕೆ ನಿಯೋಜಿಸಲಾಗಿದೆ ಎಂದು ಅಧಿಕಾರಿ ಹೇಳಿದರು.ನಾಪತ್ತೆಯಾದವರ ಪತ್ತೆಗೆ ಸ್ಥಳೀಯ ಈಜುಪಟುಗಳನ್ನು ಕೂಡ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರೇಟರ್ ನೋಯ್ಡಾದ ಯಮುನಾ ನದಿಯ ಉದ್ದಕ್ಕೂ ಮಕಾನ್‌ಪುರ್ ಖಾದರ್ ಪ್ರವಾಹದಿಂದಾಗಿ ಹೆಚ್ಚು ಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಪ್ರವಾಹದಿಂದಾಗಿ 7,200 ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೀಡಾಗಿದ್ದು, ಸುಮಾರು 6, 000 ಪ್ರಾಣಿಗಳನ್ನು ಸ್ಥಳಾಂತರ ಮಾಡಲಾಗಿದೆ.
Advertisement