ಉಜ್ಜೈನಿ: ಧಾರ್ಮಿಕ ಮೆರವಣಿಗೆಯೊಂದರ ಮೇಲೆ ಉಗುಳಿದ್ದಾರೆ ಎಂಬ ಆರೋಪದಲ್ಲಿ ಮಧ್ಯಪ್ರದೇಶದ ಉಜೈನಿಯಲ್ಲಿ ಮೂವರು ಮುಸ್ಲಿಂ ಯುವಕರಿಗೆ ಸೇರಿದ ಮನೆಗಳ ಅಕ್ರಮ ಭಾಗಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅಧಿಕಾರಿಗಳು
ತಿಳಿಸಿದ್ದಾರೆ. ಈ ಕುರಿತು ವಿಡಿಯೋವೊಂದನ್ನು ಹಿಂದೂತ್ವ ವಾಚ್ ಎಂಬ ಸಂಘಟನೆ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ಮನೆ ಧ್ವಂಸ ಸಂದರ್ಭದಲ್ಲಿ ಡ್ರಮ್ಮರ್ ಗಳೊಂದಿಗೆ ಸ್ಥಳೀಯ ಆಡಳಿತ ಮತ್ತು ಪೊಲೀಸರು ಇರುವುದನ್ನು ತೋರಿಸುತ್ತದೆ.
ಆರೋಪಿಗಳ ಬಗ್ಗೆ ಪೊಲೀಸರು ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಕಂದಾಯ ಇಲಾಖೆಗೆ ಮಾಹಿತಿ ನೀಡಿದ ನಂತರ ಅವರ ಮನೆಗಳಲ್ಲಿನ ಅಕ್ರಮ ಭಾಗಗಳನ್ನು ಪತ್ತೆ ಹಚ್ಚಿದ ಸ್ಥಳೀಯ ಆಡಳಿತ, ಸರಕುಗಳನ್ನು ಮನೆಗಳಿಂದ ತೆರವುಗೊಳಿಸುವಂತೆ ನಿವಾಸಿಗಳಿಗೆ ಹೇಳಿದ ಬಳಿಕ ಧ್ವಂಸಗೊಳಿಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಆಕಾಶ್ ಭುರಿಯಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಜುಲೈ 17 ರಂದು ಉಜ್ಜಯಿನಿಯಲ್ಲಿ ನಡೆದ 'ಬಾಬಾ ಮಹಾಕಾಲ್ ಸವಾರಿ' ಮೆರವಣಿಗೆ ಸಂದರ್ಭದಲ್ಲಿ ಕೆಲವು ಯುವಕರು ಕಟ್ಟಡದ ಬಾಲ್ಕನಿಯಲ್ಲಿ ನಿಂತು ಉಗುಳಿರುವುದು ವರದಿಯಾಗಿದೆ. ಮೆರವಣಿಗೆಯಲ್ಲಿದ್ದವರು ವಿಡಿಯೋ ಚಿತ್ರೀಕರಣ ಮಾಡಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದಡಿ ಭಾರತೀಯ ದಂಡ ಸಂಹಿತೆಯಡಿ (ಐಪಿಸಿ) ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement