ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್ ಸಿಪಿ ಶಾಸಕರ ಕಣ್ಣಾಮುಚ್ಚಾಲೆ: 'ಸ್ವಾಮಿ'ನಿಷ್ಠೆ ಯಾರಿಗೆ? ಶರದ್ ಪವಾರ್ ಅಥವಾ ಅಜಿತ್ ಪವಾರ್!

ಮಹಾರಾಷ್ಟ್ರ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಎನ್ ಸಿ ಪಿ ಶಾಸಕರು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ, ಈ ಶಾಸಕರು ಶರದ್ ಪವಾರ್ ಅಥವಾ ಅಜಿತ್ ಪವಾರ್ ಇಬ್ಬರಲ್ಲಿ ಯಾರನ್ನು ಬೆಂಬಲಿಸುತ್ತಾರೆ ಎಂಬುದು ಅಳತೆಗೆ ಸಿಗದ ವಿಷಯವಾಗಿದೆ.
ಅಜಿತ್ ಪವಾರ್ ಮತ್ತು ಶರದ್ ಪವಾರ್
ಅಜಿತ್ ಪವಾರ್ ಮತ್ತು ಶರದ್ ಪವಾರ್

ಮುಂಬಯಿ: ಮಹಾರಾಷ್ಟ್ರ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಎನ್ ಸಿ ಪಿ ಶಾಸಕರು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ, ಈ ಶಾಸಕರು ಶರದ್ ಪವಾರ್ ಅಥವಾ ಅಜಿತ್ ಪವಾರ್ ಇಬ್ಬರಲ್ಲಿ ಯಾರನ್ನು ಬೆಂಬಲಿಸುತ್ತಾರೆ ಎಂಬುದು ಅಳತೆಗೆ ಸಿಗದ ವಿಷಯವಾಗಿದೆ.

ಎನ್ ಸಿಪಿ ವಿಭಜನೆಯ ನಂತರ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ಇಬ್ಬರೂ ತಮ್ಮದೇ ಬಣ ನಿಜವಾದ ಎನ್‌ಸಿಪಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಜೊತೆಗೆ ಪ್ರತಿ ಬಣವೂ ಮನ್ನಣೆಗಾಗಿ ಪೈಪೋಟಿ ನಡೆಸುತ್ತಿರುವುದೆ, ಹೀಗಾಗಿ ಈ ವಿಷಯ ಭಾರತದ ಚುನಾವಣಾ ಆಯೋಗದ ಮೆಟ್ಟಿಲೇರಿದೆ.

ಅಜಿತ್ ಪವಾರ್ ಬಣವು ತನಗೆ 40 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದೆ, ಆದರೆ ಅವರೊಂದಿಗೆ ಅಧಿಕೃತವಾಗಿ ಕಾಣಿಸಿಕೊಂಡದ್ದು 24 ಮಂದಿ ಮಾತ್ರ. ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ, ಎನ್‌ಸಿಪಿಯ 12 ರಿಂದ 16 ಶಾಸಕರು ಮಾತ್ರ ಆಡಳಿತ ಪೀಠದಲ್ಲಿ ಕುಳಿತಿದ್ದರೆ, ಉಳಿದ 12 ರಿಂದ 14 ಶಾಸಕರು ವಿರೋಧ ಪಕ್ಷದ ಬದಿಯಲ್ಲಿ ಕುಳಿತಿರುವುದು ಕಂಡುಬಂದಿದೆ. ಉಳಿದ ಶಾಸಕರು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ.

ಈ ಎನ್‌ಸಿಪಿ ಶಾಸಕರು ಕೇವಲ ಹಾಜರಾತಿಗೆ ಸಹಿ ಹಾಕಲು ಮಾತ್ರ ಸದನಕ್ಕೆ ಬರುತ್ತಿದ್ದಾರೆ, ಆದರೆ ಪಕ್ಷದಲ್ಲಿನ ಬಿಕ್ಕಟ್ಟಿನಿಂದಾಗಿ ಈ ಶಾಸಕರು ತಟಸ್ಥವಾಗಿರಲು ಬಯಸಿದ್ದಾರೆ. ಹೀಗಾಗಿ ಸದನದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸುತ್ತಿದ್ದಾರೆ.

ಶಾಸಕರು ಅಜಿತ್ ಪವಾರ್ ಅಥವಾ ಶರದ್ ಪವಾರ್ ಇಬ್ಬರನ್ನು ನೋಡಲು ಬಯಸುವುದಿಲ್ಲ. ಆದ್ದರಿಂದ, ಯಾರಿಗೆ ಹೆಚ್ಚು ಶಾಸಕರ ಬೆಂಬಲವಿದೆ ಎಂಬುದನ್ನು ತಿಳಿಯಲು ಕಷ್ಟವಾಗುತ್ತಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಎನ್ ಸಿಪಿ ಶಾಸಕರೊಬ್ಬರು ತಿಳಿಸಿದ್ದಾರೆ.

ಅಜಿತ್ ಪವಾರ್ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನೇಮಕ ಮಾಡುವವರೆಗೂ ಗೊಂದಲ ಮುಂದುವರಿಯುತ್ತದೆ ಎಂದು ಅಜಿತ್ ಬಣದ ಶಾಸಕರೊಬ್ಬರು ತಿಳಿಸಿದ್ದಾರೆ. ನಮಗೆ 45 ಎನ್‌ಸಿಪಿ ಶಾಸಕರ ಬೆಂಬಲ ಸಿಕ್ಕಿದೆ ಆದರೆ ಅವರು ಅಜಿತ್ ದಾದಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದಾಗ ಮಾತ್ರ  ಬಹಿರಂಗವಾಗಿ ಹೊರಬರುತ್ತಾರೆ, ಇಲ್ಲದಿದ್ದರೆ ಅವರು ತಟಸ್ಥರಾಗಿರುವುದಾಗಿ ಹೇಳಿದ್ದಾರೆಂದು ತಿಳಿಸಿದ್ದಾರೆ. ಅಜಿತ್ ಪವಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಪಕ್ಷಕ್ಕೆ ಶಕ್ತಿ ತುಂಬುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಉತ್ತಮ ಹಣ ಸಿಗಲಿದೆ. ಅಲ್ಲಿಯವರೆಗೆ ತಟಸ್ಥವಾಗಿರುವುದು ಅವರಿಗೆ ಪ್ರಯೋಜನಕಾರಿಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮಂಗಳವಾರ ಸಂಜೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿರುವುದು ರಾಜ್ಯ ರಾಜಕೀಯ ಮತ್ತು ಸರ್ಕಾರದಲ್ಲಿ ಅವರ ಉನ್ನತ ಹುದ್ದೆ ಸಿಗುವ ಸಾಧ್ಯತೆಯಿದೆ ಎಂಬುದರ ಸಂಕೇತವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.  ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಯಲ್ಲಿದ್ದರೂ ಈ ಗೌಪ್ಯ ಸಭೆಯಲ್ಲಿ ಉಪಸ್ಥಿತರಿರಲಿಲ್ಲ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com