ಕಲ್ಲಿದ್ದಲು ಹಗರಣ: ಛತ್ತೀಸ್‌ಗಢ ಮಹಿಳಾ ಐಎಎಸ್ ಅಧಿಕಾರಿಯನ್ನು ಬಂಧಿಸಿದ ಇಡಿ
ರಾಯ್‌ಪುರ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಛತ್ತೀಸ್ ಗಢದಲ್ಲಿ ಕೆಲವು ಐಎಎಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ, ಶನಿವಾರ ಐಎಎಸ್ ಅಧಿಕಾರಿ ರಾನು ಸಾಹು ಅವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಲಿದ್ದಲು ಲೆವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹು ಅವರನ್ನು ಬಂಧಿಸಲಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದಲ್ಲಿ ಆರೋಪಿಯನ್ನು ಹಾಜರುಪಡಿಸಲಾಗಿದೆ ಎಂದು ಇಡಿ ವಕೀಲ ಸೌರಭ್ ಪಾಂಡೆ ತಿಳಿಸಿದ್ದಾರೆ.
ರಾನು ಸಾಹು ಅವರು ಈ ಪ್ರಕರಣದಲ್ಲಿ ಬಂಧಿತರಾದ ರಾಜ್ಯದ ಎರಡನೇ ಐಎಎಸ್ ಅಧಿಕಾರಿಯಾಗಿದ್ದಾರೆ.
2010 ರ ಬ್ಯಾಚ್‌ನ ಛತ್ತೀಸ್‌ಗಢ-ಕೇಡರ್ ಐಎಎಸ್ ಅಧಿಕಾರಿ ಸಾಹು ಅವರು ಪ್ರಸ್ತುತ ರಾಜ್ಯ ಕೃಷಿ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೊದಲು, ಅವರು ಕಲ್ಲಿದ್ದಲು-ಸಮೃದ್ಧ ಕೊರ್ಬಾ ಮತ್ತು ರಾಯಗಢ ಜಿಲ್ಲೆಗಳ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.
ನಿನ್ನೆ ರಾಯಪುರದಲ್ಲಿರುವ ಸಾಹು ಅವರ ನಿವಾಸದ ಮೇಲೆ ಇಡಿ ದಾಳಿ ನಡೆಸಿತ್ತು. ಕಲ್ಲಿದ್ದಲು ಲೆವಿ ಪ್ರಕರಣದ ತನಿಖೆಯ ಭಾಗವಾಗಿ ಸಾಹು ಅವರ ಮನೆಯ ಮೇಲೆ ಈ ಹಿಂದೆಯೂ ದಾಳಿ ನಡೆಸಲಾಗಿತ್ತು ಮತ್ತು ಅವರ ಆಸ್ತಿಗಳನ್ನು ಇಡಿ ಜಪ್ತಿ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ