ಮಹಿಳೆಯರ ಭದ್ರತೆ ಬಗ್ಗೆ ತಮ್ಮದೇ ಸರ್ಕಾರದ ಕಾನೂನು ಸುವ್ಯವಸ್ಥೆ ವಿರುದ್ಧ ಟೀಕೆ: ಸಚಿವ ರಾಜೇಂದ್ರ ಗುಧಾ ವಜಾ!

ಮಹಿಳೆಯರ ಭದ್ರತೆ ಬಗ್ಗೆ ತಮ್ಮದೇ ಸರ್ಕಾರವನ್ನು ಟೀಕಿಸಿದ ರಾಜೇಂದ್ರ ಗುಧಾ ಅವರನ್ನು ಸಚಿವ ಸ್ಥಾನದಿಂದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್  ವಜಾಗೊಳಿಸಿದ್ದಾರೆ.
ರಾಜೇಂದ್ರ ಗುಧಾ
ರಾಜೇಂದ್ರ ಗುಧಾ
Updated on

ಜೈಪುರ: ಮಹಿಳೆಯರ ಭದ್ರತೆ ಬಗ್ಗೆ ತಮ್ಮದೇ ಸರ್ಕಾರವನ್ನು ಟೀಕಿಸಿದ ರಾಜೇಂದ್ರ ಗುಧಾ ಅವರನ್ನು ಸಚಿವ ಸ್ಥಾನದಿಂದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್  ವಜಾಗೊಳಿಸಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ ರಾಜೇಂದ್ರ ಗುಧಾ ಅವರನ್ನು ರಾಜ್ಯ ಸಚಿವ ಸ್ಥಾನದಿಂದ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ ಕೆಲವೇ ಗಂಟೆಗಳ ಈ ಬೆಳವಣಿಗೆ ನಡೆದಿದೆ.

ರಾಜೇಂದ್ರ ಗುಧಾ ಅವರು ಸೈನಿಕ ಕಲ್ಯಾಣ್ (ಸ್ವತಂತ್ರ ಉಸ್ತುವಾರಿ), ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾಗಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಹೈಕಮಾಂಡ್​ ಗಮನಕ್ಕೆ ತರಲಾಯಿತು. ಹೈಕಮಾಂಡ್​ನಿಂದ ಹಸಿರು ನಿಶಾನೆ ಸಿಕ್ಕ ತಕ್ಷಣವೇ ಸಿಎಂ ಗೆಹ್ಲೋಟ್, ಗುಧಾ ಅವರನ್ನು ವಜಾಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಗೆ ಸಚಿವ, ಪರಿಷತ್ ಸದಸ್ಯ ರಾಜೇಂದ್ರ ಗುಧಾ ಅವರನ್ನು ಸಂಜೆಯೊಳಗೆ ವಜಾಗೊಳಿಸುವಂತೆ ಶಿಫಾರಸು ಮಾಡಿದ್ದಾರೆ. ರಾಜ್ಯಪಾಲರು ಈ ಶಿಫಾರಸನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ ಎಂದು ರಾಜಭವನದ ವಕ್ತಾರರು ತಿಳಿಸಿದ್ದಾರೆ.

ಮತ್ತೊಂದೆಡೆ, ತಮ್ಮನ್ನು ವಜಾಗೊಳಿಸಿದ ನಂತರ ರಾಜೇಂದ್ರ ಗುಧಾ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯರ ಮೇಲಿನ ಅಪರಾಧಗಳಲ್ಲಿ ರಾಜಸ್ಥಾನ ನಂಬರ್ ಒನ್ ಸ್ಥಾನದಲ್ಲಿದೆ. ನಾನೇನು ಹೇಳಿದ್ದೆ?, ಸತ್ಯ ಹೇಳಿದ್ದಕ್ಕೆ ನನಗೆ ಶಿಕ್ಷೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಆಡಳಿತದ ಮಣಿಪುರದಲ್ಲಿನ ಹಿಂಸಾಚಾರದ ವಿರುದ್ಧ ಕಾಂಗ್ರೆಸ್​ ಟೀಕಿಸುತ್ತಿದೆ. ಮತ್ತೊಂದೆಡೆ, ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಿಯಂತ್ರಿಸುವಲ್ಲಿ ತಮ್ಮದೇ ಸರ್ಕಾರದ ಕಾರ್ಯಕ್ಷಮತೆಯನ್ನು ಸಚಿವರಾಗಿದ್ದ ರಾಜೇಂದ್ರ ಗುಧಾ ಶುಕ್ರವಾರ ಪ್ರಶ್ನಿಸಿದ್ದರು.

ವಿಧಾನಸಭೆಯಲ್ಲಿ ರಾಜಸ್ಥಾನದ ಕನಿಷ್ಠ ಆದಾಯ ಖಾತ್ರಿ ಮಸೂದೆ - 2023ರ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರಾದ ರಾಜೇಂದ್ರ, 'ರಾಜಸ್ಥಾನದಲ್ಲಿ ಮಹಿಳೆಯರಿಗೆ ಭದ್ರತೆ ಒದಗಿಸುವಲ್ಲಿ ನಾವು ವಿಫಲರಾಗಿದ್ದೇವೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಿವೆ. ಮಣಿಪುರದ ಸಮಸ್ಯೆಯನ್ನು ಎತ್ತುವ ಬದಲು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ಹೇಳಿದ್ದರು.

ಖುದ್ದು ಸಚಿವರೇ ತಮ್ಮದೇ ಸರ್ಕಾರದ ವಿರುದ್ಧ ನೀಡಿದ್ದ ಈ ಹೇಳಿಕೆಯನ್ನು ಪ್ರತಿಪಕ್ಷದ ನಾಯಕ ರಾಜೇಂದ್ರ ರಾಥೋಡ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಳಸಿದರು. ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ರಾಜಸ್ಥಾನವು ಅಗ್ರಸ್ಥಾನದಲ್ಲಿದೆ. ಗೃಹ ಸಚಿವರೂ ಆಗಿರುವ ಗೆಹ್ಲೋಟ್ ಅವರೇ ರಾಜಸ್ಥಾನದಲ್ಲಿ ಕಳಪೆ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತಿಕೊಳ್ಳಬೇಕೆಂದು ವಾಗ್ದಾಳಿ ನಡೆಸಿದ್ದರು.   

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com