ವಿಶ್ವದ ಅಗ್ರ ಮೂರು ಆರ್ಥಿಕ ದೇಶಗಳಲ್ಲಿ ಭಾರತಕ್ಕೆ ಸ್ಥಾನ ಸದ್ಯದಲ್ಲೆ; 70 ಸಾವಿರ ಮಂದಿಗೆ ಉದ್ಯೋಗ ಪತ್ರ ವಿತರಿಸಿದ ಪ್ರಧಾನಿ ಮೋದಿ
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಶನಿವಾರ 70 ಸಾವಿರ ನೇಮಕಾತಿ ಪತ್ರಗಳನ್ನು ಹೊಸದಾಗಿ ಸೇರ್ಪಡೆಗೊಂಡವರಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿತರಿಸಿದರು. ನಂತರ ನೇಮಕಗೊಂಡವರನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಮತ್ತು ರಾಜ್ಯ ಸರ್ಕಾರ ಇಲಾಖೆಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ನೇಮಕಾತಿ ನಡೆಯುತ್ತಿದೆ.
ಭಾರತಕ್ಕೆ ಜಗತ್ತಿನ ಮೇಲೆ ನಂಬಿಕೆಯಿದೆ. ಕಳೆದ 9 ವರ್ಷಗಳಲ್ಲಿ, ಭಾರತವು 10ನೇ ಅತಿದೊಡ್ಡ ಆರ್ಥಿಕತೆಯಿಂದ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಬದಲಾಗಿದೆ. ಇಂದು, ವಿಶ್ವದಾದ್ಯಂತದ ತಜ್ಞರು ಕೆಲವೇ ವರ್ಷಗಳಲ್ಲಿ ಭಾರತವು ಮೊದಲ ಮೂರು ಸ್ಥಾನಗಳಿಗೆ ಏರಿಕೆಯಾಗಲಿದೆ ಎಂದು ಹೇಳುತ್ತಿದ್ದಾರೆ.
ಭಾರತೀಯರಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದ್ದು ನಾಗರಿಕರ ಆರ್ಥಿಕತೆ ವೈಯಕ್ತಿಕ ಆದಾಯ ಏರಿಕೆಯಾಗುತ್ತಿದೆ. ಕಳೆದ ವರ್ಷ ಅಕ್ಟೋಬರ್ 22ರಂದು ರೋಜ್ ಗಾರ್ ಮೇಳದ ಮೊದಲ ಹಂತ ಉದ್ಘಾಟನೆಯಾಗಿತ್ತು. ದೇಶಾದ್ಯಂತ 10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡುವುದು ಅಭಿಯಾನದ ಉದ್ದೇಶ ಎಂದರು.
1947ರ ಜುಲೈ 22ರಂದು ಭಾರತದ ಸಂವಿಧಾನ ತ್ರಿವರ್ಣ ಧ್ವಜವನ್ನು ಅಂಗೀಕರಿಸಿತು. ಈ ಐತಿಹಾಸಿಕ ದಿನ, ಇಂದು ಯುವಜನತೆ ನೇಮಕಾತಿ ಆದೇಶ ಪಡೆಯುತ್ತಿದ್ದಾರೆ. ಇದೊಂದು ರೀತಿಯಲ್ಲಿ ಸ್ಫೂರ್ತಿ ತುಂಬಿದಂತೆ. ಮುಂದಿನ 25 ವರ್ಷಗಳು ಭಾರತಕ್ಕೆ ಬಹಳ ಮುಖ್ಯವಾಗಿದೆ ಎಂದರು.
ಪ್ರಧಾನಿ ಮೋದಿ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಹಾಗೂ ಹಿಂದಿನ ಯುಪಿಎ ಸರ್ಕಾರದ ಕೆಲಸದ ವೈಖರಿಯನ್ನು ಟೀಕಿಸುತ್ತಾ, ಇಂದು, ಭಾರತವು ಪ್ರಬಲವಾದ ಬ್ಯಾಂಕಿಂಗ್ ಕ್ಷೇತ್ರವನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಸಾರ್ವಜನಿಕ ಬ್ಯಾಂಕ್‌ಗಳು 9 ವರ್ಷಗಳ ಹಿಂದೆ ಸಾವಿರಾರು ಕೋಟಿಗಳ ನಷ್ಟಕ್ಕೆ ಹೆಸರಾಗಿದ್ದವು, ಎನ್‌ಪಿಎ ಈಗ ದಾಖಲೆಯ ಲಾಭಕ್ಕೆ ಹೆಸರುವಾಸಿಯಾಗಿದೆ.ಇಂದು ಡಿಜಿಟಲೀಕರಣ ಮೂಲಕ ವಹಿವಾಟು ನಡೆಸುತ್ತಿದ್ದೇವೆ. ಹಿಂದಿನ ಸರ್ಕಾರದಲ್ಲಿ ಫೋನ್ ಬ್ಯಾಂಕಿಂಗ್ ಹಗರಣ ಬಹಳ ದೊಡ್ಡದಾಗಿತ್ತು ಎಂದರು.
ದೇಶಾದ್ಯಂತ 44 ಸ್ಥಳಗಳಲ್ಲಿ ರೋಜ್‌ಗಾರ್ ಮೇಳವನ್ನು ಆಯೋಜಿಸಲಾಗಿದೆ. ಹೊಸದಾಗಿ ಸೇರ್ಪಡೆಗೊಂಡವರು iGOT ಕರ್ಮಯೋಗಿ ಪೋರ್ಟಲ್‌ನಲ್ಲಿ ಆನ್‌ಲೈನ್ ಮಾಡ್ಯೂಲ್ ಆಗಿರುವ ಕರ್ಮಯೋಗಿ ಪ್ರಾರಂಭ್ ಮೂಲಕ ತರಬೇತಿ ಪಡೆಯುವ ಅವಕಾಶವನ್ನು ಪಡೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ