ನವದೆಹಲಿ: ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿಯವರು ಸದನದಲ್ಲಿ ವಿಸ್ತೃತ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ವಿರೋಧ ಪಕ್ಷಗಳ ಪ್ರತಿಭಟನೆ ಸಂಸತ್ತಿನಲ್ಲಿ ಮುಂದುವರಿಯುತ್ತಿರುವುದರ ಮಧ್ಯೆ ಇಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ವಿರೋಧ ಪಕ್ಷಗಳ ಸದಸ್ಯರು ಸೇರಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.
ಜುಲೈ 20ರಂದು ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟರೂ ಯಾವುದೇ ವಿಷಯಗಳು ಚರ್ಚೆಯಾಗುತ್ತಿಲ್ಲ ಮತ್ತು ಮಸೂದೆಗಳು ಮಂಡನೆಯಾಗುತ್ತಿಲ್ಲ. ಕೇವಲ ಗದ್ದಲ, ಕೋಲಾಹಲಗಳಲ್ಲಿ ಆರಂಭವಾಗಿ ಮುಂದೂಡಿಕೆಯಾಗುತ್ತಲೇ ಇದೆ.
ಇನ್ನು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಅವರ ಅಮಾನತನ್ನು ರದ್ದುಪಡಿಸಬೇಕೆಂದು ಸಹ ವಿರೋಧ ಪಕ್ಷಗಳ ಸದಸ್ಯರು ಒತ್ತಾಯಿಸುತ್ತಿದ್ದಾರೆ. ಮುಂದಿನ ಕಾರ್ಯತಂತ್ರಗಳ ಬಗ್ಗೆ ವಿರೋಧ ಪಕ್ಷಗಳು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಲಿವೆ ಎಂದು ಖರ್ಗೆ ಹೇಳಿದರು. ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪ್ರಮೋದ್ ತಿವಾರಿ, ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡ, ತೃಣಮೂಲ ಕಾಂಗ್ರೆಸ್ ಸಂಸದ ದೇರೆಕ್ ಒ ಬ್ರಿಯಾನ್ ಸಭೆಯಲ್ಲಿ ಇಂದು ಹಾಜರಿದ್ದರು.
ಮಣಿಪುರದಲ್ಲಿನ ಪರಿಸ್ಥಿತಿ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ದವಿದೆ ಎಂದು ಹೇಳಿದರೂ ವಿರೋಧ ಪಕ್ಷಗಳ ನಾಯಕರು ನಿಯಮದಡಿ ಚರ್ಚೆಯನ್ನು ಕೈಗೆತ್ತಿಕೊಂಡು ಮತಕ್ಕೆ ಹಾಕಬೇಕೆಂದು ಒತ್ತಾಯಿಸುತ್ತಿದ್ದಾರೆ.
Advertisement