ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಓರ್ವ ಸಾವು, ಮೂವರಿಗೆ ಗಾಯ
ಇಂಫಾಲ್: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮುಂದುವರೆದಿದ್ದು, ಗುರುವಾರ ಎರಡು ಗುಂಪುಗಳ ನಡುವೆ ಹಲವು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ.
ಇಂಫಾಲ್ ಕಣಿವೆಯ ಮೈತೆಯ್ ಪ್ರಾಬಲ್ಯದ ಬಿಷ್ಣುಪುರ್ ಜಿಲ್ಲೆ ಮತ್ತು ಬೆಟ್ಟಗಳಲ್ಲಿರುವ ಕುಕಿ ಪ್ರಾಬಲ್ಯದ ಚುರಾಚಂದ್‌ಪುರ ಜಿಲ್ಲೆಯ ಗಡಿಯಲ್ಲಿರುವ ಕಾಂಗ್ವೈನಲ್ಲಿ ಹೊಸ ಹಿಂಸಾಚಾರ ಘಟನೆ ವರದಿಯಾಗಿದೆ. ಇಂದು ಬೆಳಗ್ಗೆಯೇ ಹಿಂಸಾಚಾರ ಭುಗಿಲೆದ್ದಿತು ಮತ್ತು ಅದು ಮಧ್ಯಾಹ್ನದವರೆಗೂ ಮುಂದುವರೆಯಿತು.
ಹಲವು ಮನೆಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದ್ದು, ಸಾವು ನೋವಿನ ನಿಖರ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ.
ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) ಘಟನೆಯಲ್ಲಿ ಕುಕಿ-ಝೋ ಸಮುದಾಯದಿಂದ ಒಬ್ಬ ವ್ಯಕ್ತಿಯ ಸಾವು ಮತ್ತು ಇತರ ಮೂವರಿಗೆ ಗಾಯಗಳನ್ನು ದೃಢೀಕರಿಸುವ ಹೇಳಿಕೆಯನ್ನು ನೀಡಿದೆ.
ಹಿಂಸಾಚಾರದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಲುನ್‌ಮಿಂಥಾಂಗ್(30) ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಜಂಗ್‌ಖೋಲೆನ್ ಹಾಕಿಪ್(28), ಕಮ್ಮಿನ್‌ಲಾಲ್(32) ಮತ್ತು ತಂಜಾಹಾವೊ (34) ಎಂದು ಗುರುತಿಸಲಾಗಿದೆ ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಐಟಿಎಲ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹಿಂಸಾಚಾರ ಭುಗಿಲೆದ್ದಿದ್ದು, ಇದು ಬಹುತೇಕ ಇಡೀ ದಿನ ಮುಂದುವರೆಯಿತು ಎಂದು ಐಟಿಎಲ್‌ಎಫ್ ತಿಳಿಸಿದೆ. ದಾಳಿಯಲ್ಲಿ ಬಾಂಬ್‌ಗಳನ್ನೂ ಬಳಸಲಾಗಿದೆ ಎಂದು ಐಟಿಎಲ್‌ಎಫ್ ಆರೋಪಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ