ಮಳೆ, ಭೂಕುಸಿತ: ಉತ್ತರಾಖಂಡ, ಹಿಮಾಚಲದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಕೇಂದ್ರ ಚಿಂತನೆ
ನವದೆಹಲಿ: ಭಾರಿ ಮಳೆ ಮತ್ತು ಭೂಕುಸಿತದಿಂದ ಪದೇಪದೆ ರಸ್ತೆಗಳು ಕೊಚ್ಚಿ ಹೋಗುತ್ತಿದ್ದು, ಪ್ರಕೃತಿ ವಿಕೋಪಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ.
ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಜ್ಞರ ಸಮಿತಿ ರಚಿಸಲಿದೆ ಮತ್ತು ನೈಸರ್ಗಿಕ ವಿಕೋಪಗಳಿಗೆ ತುತ್ತಾಗುವ ಪ್ರದೇಶಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸುವ ಸಾಧ್ಯತೆಯನ್ನು ಪರಿಶೀಲಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ವಿಭಾಗವನ್ನು ತೆರೆಯಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಹೇಳಿದ್ದಾರೆ.
"ಅತಿವೃಷ್ಟಿ ಮತ್ತು ಭೂಕುಸಿತಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಅಂತರಾಷ್ಟ್ರೀಯ ನಿಯಮಗಳ ಪ್ರಕಾರ ರಸ್ತೆಗಳು, ಸೇತುವೆಗಳು ಮತ್ತು ಸುರಂಗಗಳನ್ನು ನಿರ್ಮಿಸುವ ಅವಶ್ಯಕತೆಯಿದೆ. ನಾವು ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸುವುದಕ್ಕೆ ಆದ್ಯತೆ ನೀಡುತ್ತೇವೆ" ಎಂದು ಗಡ್ಕರಿ ತಿಳಿಸಿದ್ದಾರೆ.
ಕಾಂಕ್ರೀಟ್ ರಸ್ತೆಗಳು ಟಾರ್ ರಸ್ತೆಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ ಮತ್ತು ಹವಾಮಾನ ವೈಪರೀತ್ಯಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತವೆ ಎಂದು ಅವರು ಹೇಳಿದ್ದಾರೆ.
ಎನ್‌ಡಿಟಿವಿ ಪ್ರಕಾರ, ರಾಜ್ಯದಲ್ಲಿ ಹಾಳಾದ ರಸ್ತೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಸೇತುವೆಗಳನ್ನು ಮರುನಿರ್ಮಾಣ ಮಾಡಲು ಕೇಂದ್ರ ಸರ್ಕಾರ 300 ಕೋಟಿ ರೂಪಾಯಿ ಮಂಜೂರು ಮಾಡುವುದಾಗಿ ಗಡ್ಕರಿ ಭರವಸೆ ನೀಡಿದ್ದಾರೆ ಎಂದು ಕಳೆದ ವಾರ ಹಿಮಾಚಲ ಪ್ರದೇಶದ ಲೋಕೋಪಯೋಗಿ ಇಲಾಖೆ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ತಿಳಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ