ಮಣಿಪುರ ಪರಿಸ್ಥಿತಿ ಕುರಿತ ಚರ್ಚೆಗೆ ವಿಪಕ್ಷಗಳ ಪಟ್ಟು; ಸಂಸತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಮಣಿಪುರ ಪರಿಸ್ಥಿತಿ ಕುರಿತ ಚರ್ಚೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಇಂದು ಸಹ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆ, ಗದ್ದಲ ಮುಂದುವರೆಸಿದ್ದರಿಂದ ಉಭಯ ಸದನಗಳನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಸಂಸತ್
ಸಂಸತ್

ನವದೆಹಲಿ: ಮಣಿಪುರ ಪರಿಸ್ಥಿತಿ ಕುರಿತ ಚರ್ಚೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಇಂದು ಸಹ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆ, ಗದ್ದಲ ಮುಂದುವರೆಸಿದ್ದರಿಂದ ಉಭಯ ಸದನಗಳನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಲೋಕಸಭೆ ಕಲಾಪ ಸಮಾವೇಶಗೊಳ್ಳುತ್ತಿದ್ದಂತೆಯೇ, ಸ್ಪೀಕರ್ ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಂಡರು ಆದರೆ ವಿರೋಧ ಪಕ್ಷದ ಸದಸ್ಯರು ತಮ್ಮ ಬೇಡಿಕೆ ಬೆಂಬಲಿಸಿ ಘೋಷಣೆ ಮೊಳಗಿಸಿದರು.ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕರಿಸಿದ ಅವಿಶ್ವಾಸ ನಿರ್ಣಯದ ಮೇಲೆ ತಕ್ಷಣ ಚರ್ಚೆಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದರು.

1978 ರ ಉದಾಹರಣೆಯನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು, ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ಅಂಗೀಕರಿಸಿದ ದಿನವೇ ಸದನವು ಅದರ ಮೇಲೆ ಚರ್ಚೆಯನ್ನು ಕೈಗೆತ್ತಿಕೊಂಡಿತು ಎಂದು ಹೇಳುವ ಮೂಲಕ ಚರ್ಚೆಗೆ ಆಗ್ರಹಿಸಿದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ  ಮಾತನಾಡಿ, ಸಭಾಧ್ಯಕ್ಷರು ನಿರ್ಧರಿಸಿದ ದಿನ ಮತ್ತು ಸಮಯದ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಿದ್ದು, ನಿಯಮಾವಳಿ ಪ್ರಕಾರ 10 ದಿನಗಳ ಗಡುವನ್ನು ನೀಡಲಾಗುತ್ತದೆ ಎಂದು ಹೇಳಿದರು. ಗದ್ದಲದ ನಡುವೆಯೇ ಸ್ಪೀಕರ್ ಸದನವನ್ನು ಮಧ್ಯಾಹ್ನ 12 ಗಂಟೆಗೆ ತದನಂತರ ದಿನದ ಮಟ್ಟಿಗೆ ಮುಂದೂಡಿದರು. ಬಿರ್ಲಾ ಅವರು ಬುಧವಾರ ವಿರೋಧ ಪಕ್ಷದ ಸದಸ್ಯರ ಬೆಂಬಲದೊಂದಿಗೆ ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ಅಂಗೀಕರಿಸಿದ್ದರು.

ಮಣಿಪುರಕ್ಕೆ ಸಂಬಂಧಿಸಿದ ತಮ್ಮ ಬೇಡಿಕೆಗಳನ್ನು ಪ್ರತಿಪಕ್ಷಗಳ ಸದಸ್ಯರು ಪ್ರಸ್ತಾಪಿಸಿದ ನಂತರ ರಾಜ್ಯಸಭೆಯನ್ನು ದಿನಕ್ಕೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲೂ, ಟಿಎಂಸಿ ನಾಯಕ ಡೆರಿಕ್ ಒಬ್ರಿಯನ್ ಅವರೊಂದಿಗಿನ ವಾಗ್ವಾದದ ನಂತರ ಸಭಾಪತಿ ಜಗದೀಪ್ ಧಂಖರ್ ಶುಕ್ರವಾರ ಸದನದ ಕಲಾಪವನ್ನು ದಿಢೀರ್‌ಗೆ ಮುಂದೂಡಿದರು. ಮಣಿಪುರ ಪರಿಸ್ಥಿತಿಯನ್ನು ಚರ್ಚಿಸಲು ನಿಯಮ 267 ರ ಅಡಿಯಲ್ಲಿ ವಿರೋಧ ಪಕ್ಷದ ಸದಸ್ಯರು ನೀಡಿದ ನೋಟಿಸ್‌ಗಳನ್ನು ಸ್ವೀಕರಿಸದ ವಿಷಯದ ಬಗ್ಗೆ ಟಿಎಂಸಿ ನಾಯಕ ಅಡ್ಡಿಪಡಿಸಿದ ನಂತರ ಧಂಖರ್ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಮಣಿಪುರದ ಪರಿಸ್ಥಿತಿಯ ಬಗ್ಗೆ ವಿಸ್ತೃತ ಚರ್ಚೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಾಗಿ ವಿರೋಧ ಪಕ್ಷಗಳು ಸಂಸತ್ತಿನ ಉಭಯ ಸದನಗಳ್ಲಲಿ ಪ್ರತಿಭಟನೆ ನಡೆಸುತ್ತಿದ್ದು, ಕಳೆದ ಎಂಟು ದಿನಗಳಿಂದಲೂ ಸುಗಮ ಕಲಾಪ ನಡೆಯದೇ ವ್ಯರ್ಥವಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com