ಬಿಪರ್ಜೋಯ್ ಚಂಡಮಾರುತ: ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸಿ - ಪ್ರಧಾನಿ ಮೋದಿ
ನವದೆಹಲಿ: ಬಿಪರ್ಜೋಯ್ ಚಂಡಮಾರುತ ಗುಜರಾತ್‌ನ ಕಚ್‌ಗೆ ಅಪ್ಪಳಿಸುವ ಸಾಧ್ಯತೆ ಇದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನೈಋತ್ಯ ಮುಂಗಾರಿನ ಜೊತೆಗೆ ದೇಶದ ವಿವಿಧ ರಾಜ್ಯಗಳಲ್ಲಿ 'ಬಿಪರ್ಜೋಯ್' ಚಂಡಮಾರುತ ಅಬ್ಬರ ಜೋರಾಗಿದ್ದು, ಚಂಡಮಾರುತ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದರು.
ಸಭೆಯಲ್ಲಿ ಚಂಡಮಾರುತ ಎದುರಿಸಲು ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರದ ಸನ್ನದ್ಧತೆಯನ್ನು ಪ್ರಧಾನಿ ಮೋದಿ ಪರಿಶೀಲಿಸಿದರು.
ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ರಾಜ್ಯ ಸರ್ಕಾರ ಸುರಕ್ಷಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಪ್ರಧಾನಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.
ವಿದ್ಯುತ್, ದೂರವಾಣಿ, ಆರೋಗ್ಯ ಮತ್ತು ಕುಡಿಯುವ ನೀರಿನಂತಹ ಎಲ್ಲಾ ಅಗತ್ಯ ಸೇವೆಗಳ ನಿರ್ವಹಣೆ ಮತ್ತು ಅವುಗಳಿಗೆ ಯಾವುದೇ ಹಾನಿ ಉಂಟಾದರೆ ತಕ್ಷಣವೇ ಅವುಗಳನ್ನು ಪುನಃಸ್ಥಾಪಿಸುವಂತೆ ಮೋದಿ ನಿರ್ದೇಶನ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ