ಭೋಪಾಲ್: ಕರ್ನಾಟಕ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ಇದೀಗ ಮಧ್ಯಪ್ರದೇಶದತ್ತ ತನ್ನ ಚಿತ್ತ ಹರಿಸಿದೆ. ಚುನಾವಣೆಗೆ ಕೆಲ ತಿಂಗಳು ಬಾಕಿಯಿರುವಂತೆಯೇ ಬಿಜೆಪಿಗೆ ದೊಡ್ಡ ಹೊಡೆತ ಬಿದ್ದಿದೆ.
ಮಧ್ಯಪ್ರದೇಶ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೇಂದ್ರ ಸಚಿವ ಜ್ಯೋತಿಯಾಧಿತ್ಯ ಸಿಂಧಿಯಾ ಅವರ ಆಪ್ತ ಬೈಜನಾಥ್ ಸಿಂಗ್ ಯಾದವ್ ಕೇಸರಿ ಪಕ್ಷ ತೊರೆದು, ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಶಿವಪುರಿ ಮೂಲದ ಯಾದವ್ ಮತ್ತು 15 ಜನಪದ ಸದಸ್ಯರು ಸೇರಿದಂತೆ ಅವರ ಬೆಂಬಲಿಗರನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲ್ ನಾಥ್ ಪಕ್ಷಕ್ಕೆ ಬರಮಾಡಿಕೊಂಡರು.
ಯಾದವ್ ಸಿಂಧಿಯಾ ಅವರೊಂದಿಗೆ 2020 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಆದ್ದರಿಂದ ಯಾದವ್ ತಮ್ಮ ಮಾತೃ ಪಕ್ಷಕ್ಕೆ ಮರಳಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಅರುಣ್ ಯಾದವ್ ಸುದ್ದಿಗಾರರಿಗೆ ತಿಳಿಸಿದರು.
ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿನ ವ್ಯಾಪಕ ಭ್ರಷ್ಟಾಚಾರದಿಂದ ಅಸಂತೋಷಗೊಂಡಿರುವ ಹಲವಾರು ಕಾರ್ಯಕರ್ತರು ಮತ್ತು ನಾಯಕರು ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಮತ್ತಿತರ ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಸೂಕ್ತ ಸಮಯದಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ. ಅಷ್ಟೇ ಅಲ್ಲ, ಸಿಂಧಿಯಾ ಜೊತೆಗೆ ಬಿಜೆಪಿ ಸೇರಿದ ಬಹುತೇಕ ಕಾಂಗ್ರೆಸ್ ನಾಯಕರು ಕೂಡ ತಮ್ಮ ಮಾತೃಪಕ್ಷಕ್ಕೆ ಮರಳುತ್ತಾರೆ. ಸಿಂಧಿಯಾ ಮಾತ್ರ ಬಿಜೆಪಿಯಲ್ಲಿ ಉಳಿಯುವ ದಿನ ಬರುತ್ತದೆ. ಎಂದು ಅರುಣ್ ಯಾದವ್ ಹೇಳಿದರು.
Advertisement