ಉತ್ತರ ಪ್ರದೇಶ ಆಸ್ಪತ್ರೆಯಲ್ಲಿ 54 ಮಂದಿ ಮೃತಪಟ್ಟಿದ್ದು ಉಷ್ಣಹವೆಯಿಂದಲ್ಲ: ತನಿಖಾ ತಂಡ
ಲಖನೌ: ಉತ್ತರ ಪ್ರದೇಶದ ಬಲ್ಲಿಯಾದಲ್ಲಿ 400 ಮಂದಿ ಅಸ್ವಸ್ಥರಾಗಿ 54 ಮಂದಿ ಸಾವನ್ನಪ್ಪಿರುವುದಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಸ್ಪಷ್ಟನೆ ನೀಡಿದ್ದು, ಉಷ್ಣಹವೆಯ ಪರಿಣಾಮದಿಂದ ಸಾವನ್ನಪ್ಪಿರುವುದಲ್ಲ ಎಂದು ಹೇಳಿದ್ದಾರೆ.
23 ರೋಗಿಗಳು ಜೂ.15 ರಂದು ಸಾವನ್ನಪ್ಪಿದ್ದರೆ, ಜೂ.16 ರಂದು 20 ಮಂದಿ, ನೆನ್ನೆ 11 ಮಂದಿ ಸಾವನ್ನಪ್ಪಿದ್ದಾರೆ. ಸರ್ಕಾರ ನೇಮಕ ಮಾಡಿದ್ದ ವೈದ್ಯರ ತಂಡ ಈ ಸಾವುಗಳಿಗೆ ಉಷ್ಣಹವೆ ಕಾರಣವಾಗಿದೆ ಎಂದು ಹೇಳಿತ್ತು. ಆದರೆ ಸಾವು ಪ್ರಕರಣಗಳ ಬಗ್ಗೆ ತನಿಖೆ ನಡೆಸಿದ್ದ ಲಖನೌ ನ ಸರ್ಕಾರಿ ಹಿರಿಯ ವೈದ್ಯರ ಪ್ರಕಾರ ಉಷ್ಣಹವೆ ಜನರ ಸಾವಿಗೆ ಕಾರಣವಲ್ಲ ಎಂದು ಹೇಳಿದ್ದಾರೆ.
ಮೇಲ್ನೋಟಕ್ಕೆ ಇದು ಉಷ್ಣಹವೆಯ ಕಾರಣದಿಂದಾಗಿ ಸಂಭವಿಸಿರುವ ಸಾವುಗಳಲ್ಲ ಎಂದು ಕಂಡುಬಂದಿದೆ. ಏಕೆಂದರೆ ಇದೇ ರೀತಿಯ ವಾತಾವರಣವಿರುವ ಪಕ್ಕದ ಜಿಲ್ಲೆಗಳಲ್ಲಿ ಈ ರೀತಿಯ ಸಾವುಗಳು ಸಂಭವಿಸುತ್ತಿಲ್ಲ. ಈಗ ಸಂಭವಿಸಿರುವ ಸಾವುಗಳ ಪೈಕಿ ಪ್ರಾಥಮಿಕ ಲಕ್ಷಣಗಳು ಎದೆ ನೋವಿನದ್ದಾಗಿದ್ದು, ಇದು ಉಷ್ಣಹವೆಯಲ್ಲಿ ಕಂಡುಬರುವ ಲಕ್ಷಣಗಳಲ್ಲ ಎಂದು ಸರ್ಕಾರದ ಹಿರಿಯ ವೈದ್ಯಾಧಿಕಾರಿ ಎಕೆ ಸಿಂಗ್ ಹೇಳಿದ್ದಾರೆ.
ಈ ಸಾವುಗಳಿಗೆ ನೀರಿನ ಸಂಬಂಧಿತ ಕಾರಣಗಳೂ ಇರಬಹುದು ಇದರ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ