ನವದೆಹಲಿ: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಮಂಗಳವಾರ ಮಳೆಯಾಗುತ್ತಿದ್ದರೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸೆಖೆ, ಬಿಸಿಗಾಳಿ ಮುಂದುವರಿದಿದೆ.
ಜೂನ್ ತಿಂಗಳು ಕೊನೆಯಾಗುತ್ತಾ ಬಂದರೂ ಹಲವು ಕಡೆಗಳಲ್ಲಿ ಮಳೆಯಾಗಿಲ್ಲ. ಉಷ್ಣಾಂಶ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆಗಳ ಕುರಿತು ಚರ್ಚಿಸಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಂದು ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ಬಿಸಿಗಾಳಿ ಬೀಸುವುದರಿಂದ ಜನರಿಗೆ ಅನಾರೋಗ್ಯ ಕಾಡುವ ಸಾಧ್ಯತೆಯಿದ್ದು, ಈ ಬಗ್ಗೆ ಸಾರ್ವಜನಿಕ ಆರೋಗ್ಯ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಬೆಳಗ್ಗೆ 11.30 ಕ್ಕೆ ಸಭೆ ನಡೆಯಲಿದ್ದು, ಅಲ್ಲಿ ಕೇಂದ್ರ ಆರೋಗ್ಯ ಸಚಿವರು ದೇಶದಲ್ಲಿ ಬಿಸಿಗಾಳಿಯಿಂದ ಉಂಟಾದ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.
ಡಾ ವಿ ಕೆ ಪಾಲ್, ನೀತಿ ಆಯೋಗದ ಡಾ ರಾಜೀವ್ ಬಹ್ಲ್ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕರು, ಭಾರತೀಯ ಹವಾಮಾನ ಇಲಾಖೆ (IMD) ತಜ್ಞರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬಿಸಿ ಗಾಳಿ: ದೇಶದಾದ್ಯಂತ ಬಿಸಿಲಿನ ಬೇಗೆಯಿಂದ ವಿವಿಧ ಜನರು ಬಳಲುತ್ತಿದ್ದಾರೆ. ನಿನ್ನೆ ಸೋಮವಾರ, ಬಿಹಾರದ ಗಯಾ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ನಡುವೆ ಇಬ್ಬರು ವ್ಯಕ್ತಿಗಳು ಅನುಗ್ರಹ ನಾರಾಯಣ ಮಗಧ್ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದಾರೆ.
ಅನುಗ್ರಹ ನಾರಾಯಣ ಮಗಧ್ ವೈದ್ಯಕೀಯ ಕಾಲೇಜಿನಲ್ಲಿ 58 ರೋಗಿಗಳು ದಾಖಲಾಗಿದ್ದಾರೆ. ಬಿಸಿಗಾಳಿಯಿಂದಾಗಿ ಬಿಹಾರದ ಪಾಟ್ನಾದಲ್ಲಿ 12 ನೇ ತರಗತಿವರೆಗಿನ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಆದೇಶವು ಜೂನ್ 24 ರವರೆಗೆ ಜಾರಿಯಲ್ಲಿರುತ್ತದೆ.
ಪೂರ್ವ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ, ಮಹಾರಾಷ್ಟ್ರದ ವಿದರ್ಭ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಮುಂದಿನ ಎರಡು ದಿನಗಳವರೆಗೆ ಬಿಸಿಗಾಳಿಯು ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಶಾಖದ ಹೊಡೆತದಿಂದ ಸಾವುಗಳು ಸಂಭವಿಸಿವೆ.
Advertisement