ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ನಂದನ್ ನಿಲೇಕಣಿ ಅವರು ತಾವು ಎಂಜಿನಿಯರಿಂಗ್ ಕಲಿತ ಐಐಟಿ ಬಾಂಬೆಗೆ 315 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಇದರೊಂದಿಗೆ ಪ್ರತಿಷ್ಠಿತ ಇಂಜಿನಿಯರಿಂಗ್ ಸಂಸ್ಥೆಗೆ ಹಳೆ ವಿದ್ಯಾರ್ಥಿ ನಿಲೇಕಣಿ ನೀಡಿದ ಒಟ್ಟು ದೇಣಿಗೆ 400 ಕೋಟಿ ರೂ. ಗೆ ತಲುಪಿದೆ. ಈ ಹಿಂದೆ ಅವರು ಐಐಟಿ ಬಾಂಬೆ 85 ಕೋಟಿ ರೂ.ದೇಣಿಗೆ ನೀಡಿದ್ದರು.
ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆಯಲು 1973 ರಲ್ಲಿ ಐಐಟಿ ಬಾಂಬೆ ಸೇರಿದ್ದ 68 ವರ್ಷದ ನಿಲೇಕಣಿ ಅವರು, ತಾವು ಕಲಿತ ಕಾಲೇಜ್ ನೊಂದಿಗಿನ ಒಡನಾಟದ 50 ವರ್ಷಗಳ ನೆನಪಿಗಾಗಿ ಹೊಸ ದೇಣಿಗೆಯನ್ನು ನೀಡುತ್ತಿರುವುದಾಗಿ ಹೇಳಿದ್ದಾರೆ.
ಈ ಕೊಡುಗೆಯು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರಸಿದ್ಧ ಸಂಸ್ಥೆಯಲ್ಲಿ ಟೆಕ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಪೋಷಿಸುತ್ತದೆ ಎಂದು ನಂದನ್ ನಿಲೇಕಣಿ ಅವರು ಟ್ವೀಟ್ ಮಾಡಿದ್ದಾರೆ.
ದೇಶದ ಹಳೆಯ ವಿದ್ಯಾರ್ಥಿ ನೀಡಿದ ಅತಿದೊಡ್ಡ ದೇಣಿಗೆಗಳಲ್ಲಿ ಒಂದಾಗಿರುವ ಈ ದೇಣಿಗೆಯು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಗಳಲ್ಲಿ ಜಾಗತಿಕ ನಾಯಕನಾಗಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಗಣನೀಯ ಕೊಡುಗೆ ನೀಡಲು ಐಐಟಿ- ಬಾಂಬೆಗೆ ಸಹಕಾರಿಯಾಗಲಿದೆ ಎಂದು ನಿಲೇಕಣಿ ಮತ್ತು ಐಐಟಿ ಬಾಂಬೆ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.
Advertisement