ಭಾರತದಿಂದ ಕಳುವಾಗಿದ್ದ 100 ಕ್ಕೂ ಹೆಚ್ಚು ಪುರಾತನ ವಸ್ತು ಹಿಂತಿರುಗಿಸಲು ಅಮೇರಿಕ ಸರ್ಕಾರ ನಿರ್ಧಾರ: ಪ್ರಧಾನಿ ಮೋದಿ

ಭಾರತದಿಂದ ಕಳುವಾಗಿದ್ದ 100 ಕ್ಕೂ ಹೆಚ್ಚು ಪುರಾತನ ವಸ್ತುಗಳನ್ನು ಹಿಂತಿರುಗಿಸಲು ಅಮೇರಿಕಾ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೇರಿಕಾದಲ್ಲಿ ಪ್ರಧಾನಿ ಮೋದಿ
ಅಮೇರಿಕಾದಲ್ಲಿ ಪ್ರಧಾನಿ ಮೋದಿ

ನವದೆಹಲಿ: ಭಾರತದಿಂದ ಕಳುವಾಗಿದ್ದ 100 ಕ್ಕೂ ಹೆಚ್ಚು ಪುರಾತನ ವಸ್ತುಗಳನ್ನು ಹಿಂತಿರುಗಿಸಲು ಅಮೇರಿಕಾ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಮೇರಿಕಾದ ರೊನಾಲ್ಡ್ ರೇಗನ್ ಸೆಂಟರ್ ನಲ್ಲಿ ಅನಿವಾಸಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಮೇರಿಕಾ ಸರ್ಕಾರದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. 

ಭಾರತದಿಂದ ಕಳುವಾಗಿದ್ದ ಈ ಪುರಾತನ ವಸ್ತುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದವು, ಇವುಗಳನ್ನೆಲ್ಲಾ ವಾಪಸ್ ನೀಡಲು ನಿರ್ಧರಿಸಿರುವ ಅಮೇರಿಕಾ ಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
 
ಭಾರತೀಯ ಮೂಲದ ಈ ಪುರಾತನ ವಸ್ತುಗಳು ಕಾನೂನು ಬದ್ಧವಾಗಿಯೋ ಅಥವಾ ಅಕ್ರಮವಾಗಿಯೋ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿದ್ದರೂ ಅದನ್ನು ವಾಪಸ್ ನೀಡುವ ಅಮೇರಿಕಾದ ನಿರ್ಧಾರ ಎರಡೂ ರಾಷ್ಟ್ರಗಳ ನಡುವಿನ ಭಾವನಾತ್ಮಕ ನಂಟನ್ನು ತೋರುತ್ತದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರ ಪ್ರಪಂಚದಾದ್ಯಂತದ ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಮರಳಿ ತರುತ್ತಿದೆ.

"ಶತಮಾನಗಳಿಂದ, ಅಸಂಖ್ಯಾತ ಬೆಲೆಬಾಳುವ ಕಲಾಕೃತಿಗಳು, ಕೆಲವು ಆಳವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಕದ್ದು ವಿದೇಶಕ್ಕೆ ಕಳ್ಳಸಾಗಣೆ ಮಾಡಲಾಗಿದೆ. ಸರ್ಕಾರವು 'ಭಾರತೀಯ ಕಲಾಕೃತಿಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮರಳಿ ತರಲು ಪೂರ್ವಭಾವಿ ವಿಧಾನವನ್ನು ಅಳವಡಿಸಿಕೊಂಡಿದೆ" ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
 
ಪ್ರಧಾನಿ ಮೋದಿ ಈ ಪುರಾತನ ವಸ್ತುಗಳ ವಿಷಯವಾಗಿ ಜಾಗತಿಕ ಮಟ್ಟದ ನಾಯಕರೊಂದಿಗೆ ಹಲವು ಸಂದರ್ಭಗಳಲ್ಲಿ ಚರ್ಚಿಸಿದ್ದು, ಈ ವರೆಗೂ ಇಂತಹ ಅಪರೂಪದ 251 ಪ್ರಾಚೀನ ವಸ್ತುಗಳನ್ನು ವಾಪಸ್ ತರಲಾಗಿದ್ದು, ಈ ಪೈಕಿ 2014 ರಿಂದ ಈ ವರೆಗೂ 238 ವಸ್ತುಗಳನ್ನು ವಾಪಸ್ ತರಲಾಗಿದೆ.
 
2022 ರಲ್ಲಿ ಅಮೇರಿಕಾ ಅಧಿಕಾರಿಗಳು ಭಾರತಕ್ಕೆ ಸಂಬಂಧಿಸಿದ 307 ಪುರಾತನ ವಸ್ತುಗಳನ್ನು ವಾಪಸ್ ನೀಡಿದ್ದರು. ಕಳ್ಳಸಾಗಣೆ ಜಾಲದಿಂದ ವಶಕ್ಕೆ ಪಡೆಯಲಾಗಿದ್ದ ಇದರ ಮೌಲ್ಯ 4 ಮಿಲಿಯನ್ ಯುಎಸ್ ಡಿ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com